Thursday, May 11, 2017

ಟಾಪ್ ಸ್ಟೇಷನ್ ಟ್ರೆಕ್

View of Kurangani hill range from Munthal
ಬೋಧಿನಾಯಕ್ಕನೂರಿನಿಂದ ೧೬ ಕಿ.ಮೀ ಇರೋ ಕುರಂಗನಿ ಎಂಬ ಊರಿಗೆ ಬರಲು ಮುಂತಾಲ್(munthal) ಮುಂತಾದ ಹಳ್ಳಿಗಳನ್ನು ದಾಟಿ ಬರುವಷ್ಟರಲ್ಲಿ ೭:೫೦ ಆಗಿತ್ತು. ಕುರಂಗನಿಯ ಶುರುವಾತಿನಲ್ಲೇ ನಮಗೊಂದು ಅಚ್ಚರಿ ಮತ್ತು ಬೇಸರ ಕಾದಿತ್ತು. ಅಲ್ಲಿ ಸಿಕ್ಕ ಸತೀಷ್ ಎಂಬಾತ ೧೫೦೦ ಕೊಟ್ಟರೆ ತಾನೇ ಗೈಡುಗಳನ್ನು ಕೊಟ್ಟು ಕ್ಯಾಂಪ್ ಹಾಕಲೂ ವ್ಯವಸ್ಥೆ ಮಾಡುತ್ತೇನೆ ಎಂದ. ಇಲ್ಲೇ ಟೆಂಟುಗಳು ಸಿಗುತ್ತೆ ಅಂತ ಗೊತ್ತಿದ್ದರೆ ಮೊದಲನೆ ದಿನವೇ ಇಲ್ಲಿಗೆ ಬರಬಹುದಾಗಿತ್ತು ! ಅಲ್ಲೇ ಮುಂದೆ ಬಂದಾಗ ಫ್ರೆಷ್ ಆಗಲೂ ಜಾಗವಿತ್ತು. ನಮಗೆ ಟೆಂಟ್ ಬೇಡ ಗೈಡ್ ಮಾತ್ರ ಬೇಕು ಅಂತ ಏಳು ಜನರಿದ್ದರೂ  ೧೦೦೦ ಕೊಟ್ಟು  ಶಿವ ಅನ್ನೋ ಗೈಡನ್ನು ತಗೊಂಡು ಮುನ್ನಡೆದೆವು. ಅಲ್ಲಿಂದ ಸುತ್ತುಬಳಸು ರಸ್ತೆಯಲ್ಲಿ ಸುಮಾರು ಒಂದು ಕಿ.ಮೀ ಸಾಗಿದರೆ ಕುರಂಗನಿಯಿಂದ ಟಾಪ್ ಸ್ಟೇಷನ್ನಿಗೆ ಸಾಗೋ ದಾರಿ, ಅದಕ್ಕಾಗಿ ಟಿಕೇಟ್ ತಗೊಳ್ಳೋ ಕೌಂಟರ್ ಸಿಗುತ್ತೆ.
Entry ticket details for Top station trek
 ನಾವು ಅಲ್ಲಿ ಬೆಳಗ್ಗಿನ ೮:೨೦ ಕ್ಕೇ ಬಂದಿದ್ದರಿಂದ ಅಲ್ಯಾರೂ ಇರಲಿಲ್ಲ. ಅವರೆಲ್ಲಾ ೯:೦೦ ಕ್ಕೆ ಬರುತ್ತಾರೆ , ನೀವು ಬರುವ ವೇಳೆ ಟಿಕೇಟ್ ತಗೊಂಡಿರುತ್ತೇನೆ ಅಂತ ಅಲ್ಲಿದ ರೇಟಾದ ತಲಾ ೨೦೦ ತಗೊಂಡು , ಆ ಗೈಡಿನ ಜೊತೆ ಮಾಡಿ ಸತೀಷ ಮಾಯವಾದ.
Our Group(From Left: Balu, Pramod, Tejas, Sandesh, Varun, Nagaraj , Guide Shiva and me)

ಕೆಲವೊಂದು ಕಡೆ ಸರಿಯಾದ ಮಾರ್ಗಗಳಿಲ್ಲದಿದ್ದರೂ ಬುಡದಿಂದ ಮೇಲೊರೆಗೋ ತಪ್ಪಲೇ ಆಗದಂತಹ ಕಲ್ಲ ದಾರಿ. ಹಾಗಾಗಿ ಗೈಡಿಲ್ಲದಿದ್ದರೂ ನಾವು ಮೇಲೆ ತಲುಪುತ್ತಿದ್ದೆವೇನೋ.ಆದರೆ ಇಂತಲ್ಲಿ ನೀರಿದೆ ಅಂತ ಮಿಡಲ್ ಸ್ಟೇಷನ್ ಬರುವ ಮೊದಲೇ ಹೇಳಿ ನಮ್ಮ ಟ್ರೆಕ್ಕನ್ನು ದಡ ಸೇರಿಸಿದ್ದಕ್ಕಾಗಿ ಗೈಡನ್ನು ತಗೊಂಡಿದ್ದು ವೇಸ್ಟೇನೂ ಆಗಲಿಲ್ಲವೆಂಬ ಭಾವ ಕೊನೆಗೆ ಮೂಡುತ್ತಿತ್ತು.
Trekking trail for Top station, Middle station
ಕುಡುಕುಮಲೈಯಾ ಟಾಪ್ ಸ್ಟೇಷನ್ನಾ ?
ಕುರಂಗನಿ ಎಂಬ ಊರಿನ ಸುತ್ತಮುತ್ತ ಹಲವು ಬೆಟ್ಟಗಳಿವೆ. ಅವುಗಳಲ್ಲಿ ಮುಖ್ಯವಾದವು ಕುಡುಕುಮಲೈ ಮತ್ತು ಟಾಪ್ ಸ್ಟೇಷನ್ನುಗಳು. ಚಳಿಗಾಲ ಇವೆರಡಕ್ಕೂ ಟ್ರೆಕ್ಕಿಂಗ್ ಹೋಗೋಕೆ ಫೇಮಸ್ಸಂತೆ. ವರ್ಷವಿಡೀ ಇಲ್ಲಿಗೆ ಹೋಗಬಹುದಾದರೂ ಮಳೆಗಾಲದಲ್ಲಿ ಹೋಗೋದು ಸ್ವಲ್ಪ ಒದ್ದಾಟವೇ. ಮಳೆ, ಚಳಿಯಲ್ಲಿ ಸಿಕ್ಕಾಕಿಕೊಂಡು ಒದ್ದಾಡಿದ ಕತೆಯನ್ನ ಆಮೇಲೆ ಹೇಳ್ತೀನಿ.
Few paths/short cuts where you may get lost if you are coming  without any guide

ಕುಡುಕುಮಲೈಗೆ ೧೪ ಕಿ.ಮೀ ಟ್ರೆಕ್ ಮಾಡಿ ಅಲ್ಲೇ ಟೆಂಟ್ ಹಾಕಿ ಉಳಿಯಬೇಕಾದರೆ(ಅಷ್ಟೆಲ್ಲಾ ಟ್ರೆಕ್ ಮಾಡಿದ ಮೇಲೆ ಅಂದೇ ವಾಪಾಸ್ ಬರೋ ಮನಸ್ಸು ಇರೋಲ್ಲವಾದ್ದರಿಂದ), ಟಾಪ್ ಸ್ಟೇಷನ್ ಟ್ರೆಕ್ಕಿಗೆ ಹಲವಾರು ಆಯ್ಕೆಗಳಿವೆ. ಕೆಲವು ಬ್ಲಾಗುಗಳಲ್ಲಿ ಟಾಪ್ ಸ್ಟೇಷನ್ನಿಗೆ ೯ ಕಿ.ಮೀ ಅಂತಿದ್ದರೆ ಗೈಡ್ ೧೪ ಅಂತಿದ್ದ. ನಾವು ಮೂರೂವರೆ ಘಂಟೆಯಲ್ಲಿ ಟಾಪ್ ಸ್ಟೇಷನ್ನಿನ ತುದಿ ತಲುಪಿದ್ದರಿಂದ ಅದಕ್ಕೆ ೧೪ ಕಿ.ಮೀ ಇರಲಾರದೇನೋ,೯ ರಿಂದ ೧೪ ರ ಮಧ್ಯ ಎಷ್ಟೋ ಇರಬೇಕು ಅಂತನಿಸುತ್ತೆ. ಟಾಪ್ ಸ್ಟೇಷನ್ನಿನ ಹತ್ತಿರ ಕುರುಂಗನಿ ಊರಲ್ಲೇ ಸಿಗೋ ಟೆಂಟ್ ತಗೊಂಡು ಕ್ಯಾಂಪ್ ಮಾಡಬಹುದು. ಇಲ್ಲಾ ಟಾಪ್ ಸ್ಟೇಷನ್ನಿನ ಮೇಲಿರುವ ಲಾಡ್ಜುಗಳಲ್ಲಿ ರೂಮಿಗೆ ೧೬೦೦ ಕೊಟ್ಟು ಅಲ್ಲೇ ಉಳಿಯಬಹುದು. ೧೬೦೦ ಕೊಟ್ಟು ಅಲ್ಲೇ ಉಳಿದ ಕೆಲವು ಟ್ರೆಕ್ಕರ್ರುಗಳು ನಮಗೆ ಕೆಳಗಿಳಿಯುತ್ತಾ ಸಿಕ್ಕಿದ್ದರಿಂದ ಇವೆಲ್ಲಾ ಮಾಹಿತಿ ಸಿಕ್ಕಿದ್ದರೂ ಇವೆಲ್ಲಾ ಮುಂಚೆ ಸಿಕ್ಕಿದ್ದರೆ ಏನಾಗ್ತಿತ್ತು ಅನ್ನೋ ಬೇಸರ ಕಾಡಿತ್ತು.  ಗೈಡಿನ, ಟೆಂಟವನ, ಲಾಡ್ಜಿನವರ ನಂಬರುಗಳನ್ನೆಲ್ಲಾ ಈ ಪೋಸ್ಟಿನ ಕೊನೆಯಲ್ಲಿ ಕೊಡೋಣವೆನ್ನುತ್ತಾ ನಮ್ಮ ಟ್ರೆಕ್ಕಿಂಗಿನ ಕತೆಗೆ ವಾಪಾಸ್ಸಾಗೋಣ.

ಹಸಿರ ಕಾನನದ ಮಧ್ಯೆಯೊಂದು ಜಲಧಾರೆ
ಟಾಪ್ ಸ್ಟೇಷನ್ನಲ್ಲಿ ಹಸಿರಿರತ್ತೆ ಅಂದ್ರೂ ತೇಜಸ್ ತಮಿಳುನಾಡಿಗೆ ಬರೋಕೆ ಮೊದಲು ಮನಸ್ಸು ಮಾಡಿರಲಿಲ್ಲ. ಅಲ್ಲಿ ಸೆಖೆಗೆ ಬೆಂದೆದ್ದು ಹೋಗ್ತೀವಿ ಅನ್ನೋ ಅವನ ಮಾತು ಮೊದಲರ್ಧ ದಿನ ಮತ್ತು ಎರಡನೇ ದಿನದರ್ಧ ನಿಜವೂ ಆಗಿತ್ತೆನ್ನಿ. ಆದರೆ ಕೊನೆಗೂ ಆತ ಇಲ್ಲಿಗೆ ಬರಲೊಪ್ಪುವಂತೆ ಮಾಡಿದ್ದು ಇಲ್ಲಿನ ಹಸಿರ ಸಿರಿಯ ಚಿತ್ರಗಳೇ.  ಬೇಸ್ ಕ್ಯಾಂಪಿನಿಂದ ಸುಮಾರು ೧೫-೨೦ ನಿಮಿಷ ಸಾಗುವಷ್ಟರಲ್ಲೇ ಒಂದು ಜಲಪಾತದ ಸದ್ದು ಎದುರಾಗುತ್ತೆ.
Views of the Kurangani hills during the trek to topstation

ಜಲಪಾತದ ಬುಡಕ್ಕೆ ಸಾಗೋದು ಸಾಧ್ಯವಾಗದಿದ್ದರೂ ಜಲಪಾತವಾಗಿ ಧುಮುಕಿದ ನೀರು ನಂತರ ಮುಂದೆ ಸಾಗುವಲ್ಲಿ ಆಟವಾಡಬಹುದು.
One of the multi stepped waterfalls on the the Top station trek
ಇಲ್ಲೇ ನೀರಾಡುತ್ತಾ ನಿಂತರೆ ನಮ್ಮ ಟ್ರೆಕ್ಕಿಂಗ್ ಇವತ್ತಿಗೆ ಆಗೋಲ್ಲ. ಬರುವಾಗ ಆಡಿದರಾಯಿತು ಅಂತ ಮುಂದೆ ಸಾಗಿದೆವು. ನಿಧಾನವಾಗಿ ಮೇಲೆ ಹತ್ತುತ್ತಿದ್ದಂತೆ ವಾತಾವರಣ ತಂಪೆನಿಸುತ್ತಿತ್ತು. ಆದರೂ ಹತ್ತೋ ಶ್ರಮಕ್ಕೆ, ಅಲ್ಲಿದ್ದ ವಾತಾವರಣಕ್ಕೆ ಬೆವರ ಧಾರೆ. ತಲಾ ಎರಡೆರಡು ಬಾಟಲ್ ನೀರು ತರಲು ಹೇಳಿದ್ದು ನೆರವಾಗಿತ್ತು.
One more waterfalls on the top station trek

ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಅಲ್ಲಿ ಧುಮುಕುತ್ತಿದ್ದ ಮತ್ತೊಂದು ಜಲಪಾತ ಸಿಕ್ಕಿತು. ಕೆಲವೊಂದು ಬ್ಲಾಗುಗಳಲ್ಲಿ ಈ ಎರಡು ಜಲಪಾತಗಳಲ್ಲಿ ಒಂದನ್ನು ಹತ್ತಿ ಮೇಲಕ್ಕೆ ಸಾಗಬೇಕು ಅಂತಿದೆ. ಆದರೆ ಅಷ್ಟೆಲ್ಲಾ ರಿಸ್ಕ್ ತಗೊಳ್ಳೋ ಅನಿವಾರ್ಯತೆಯಿಲ್ಲ. ಇವುಗಳು ಕಂಡರೂ ಸ್ವಲ್ಪ ದೂರದಿಂದ ಹೊಗೋ ಸುರಕ್ಷಿತವಾದ ದಾರಿಯಿರೋದ್ರಿಂದ ನಮ್ಮ ಗೈಡ್ ದಾರಿಯಲ್ಲೇ ನಮ್ಮನ್ನು ಕೊಂಡೊಯ್ದ.


ಮಿಡಲ್ ಸ್ಟೇಷನ್:
ಸುಸ್ತಾದವರನ್ನು ಅಲ್ಲಲ್ಲಿ ಕೂರಿಸುತ್ತಾ, ಸುತ್ತ ಸಿಗುತ್ತಿದ್ದ ಹೆಸರು ಗೊತ್ತಿಲ್ಲದ ಅದೆಷ್ಟೋ ಜೀವರಾಶಿಗಳ ಸೌಂದರ್ಯವನ್ನು ಆಸ್ವಾದಿಸುತ್ತಾ  ಮುಂದೆ ಸಾಗುವ ಹೊತ್ತಿಗೆ ಇನ್ನು ಸ್ವಲ್ಪ ದೂರದಲ್ಲಿ ಮಿಡಲ್ ಸ್ಟೇಷನ್ ಬರುತ್ತೆ ಅಂದ ಗೈಡು.


One of the views during top station trek
 ೧೦ ಘಂಟೆಯ ಸುಮಾರಿಗೆ ನಾವು ಬಂದು ತಲುಪಿದ ಇಲ್ಲಿ ಒಂದು ಕಟ್ಟೆಯ ಮೇಲೆ ನಾಗರ ಕಲ್ಲುಗಳನ್ನು ಪ್ರತಿಷ್ಟಾಪಿಸಲಾಗಿದ್ದು ಪಕ್ಕದಲ್ಲೇ ಒಂದು ಸಣ್ಣ ಗುಡಿಯಿದೆ.
Naga Idols at the middle station
  ಬರೀ ಇವಿಷ್ಟೇ ಆಗಿದ್ದರೆ ಇದಕ್ಕೆ ಇಷ್ಟು ಪ್ರಾಮುಖ್ಯತೆಯಿರುತ್ತಿರಲಿಲ್ಲವೇನೋ. ಇಲ್ಲಿ ಮೇಲಿನ ನೀರ ಒರತೆಯಿಂದ ಕೆಳಗೆ ನೀರು ತರುವ ನಲ್ಲಿಯೊಂದಿದೆ. ಹಾಗಾಗಿ ಖಾಲಿಯಾದ ಬಾಟಲ್ಲುಗಳನ್ನೆಲ್ಲಾ ತುಂಬಿಸಿಕೊಳ್ಳಲು, ತಂದ ಬಿಸ್ಕೇಟು, ಹಣ್ಣುಗಳಲ್ಲಿ ಒಂದಿಷ್ಟು ತಿಂದು, ಮತ್ತೊಂದಿಷ್ಟು ಫೋಟೋ ತೆಗೆದುಕೊಳ್ಳೋಕೆ ಪ್ರಶಸ್ತವಾದ ಜಾಗವಿದು
Small temple at the middle station
A watersource at middle station
Our group resting near the watersource and temple in middle station
ಬರೀ ಗುಡಿಯಿರೋ ಜಾಗಕ್ಕೆ ಮಿಡಲ್ ಸ್ಟೇಷನ್ನೆಂಬ ಹೆಸರಲ್ಲ. ಹಾಗೇ ಮೇಲೆ ಹತ್ತಿದರೆ ಒಂದೂರೂ ಸಿಗುತ್ತೆ. ಪೋಸ್ಟಾಪೀಸಿನ ಡಬ್ಬಿಯೂ ಇರೋ ಈ ಗುಡ್ಡದ ಮೇಲಿನ ಊರಲ್ಲಿ ಅಂಗಡಿಯೂ ಒಂದಿದೆ. ಮುಂಚೆಯೇ ಬುಕ್ಕಿಂಗ್ ಮಾಡ್ಕೊಂಡ್ರೆ ಇಲ್ಲೂ ಉಳಿಯಬಹುದೇನೋ. ಆದರೆ ಉಳಿಯುವ ಹೆಚ್ಚಿನವರೆಲ್ಲಾ ಮೇಲ್ಗಣ ಸ್ಟೇಷನ್ನಿನಲ್ಲೇ ಉಳಿಯುತ್ತಾರೆ.

ಕುಡುಕು ಮಲೈಯ ಸರ್ಪದಾರಿ:
ಚಿಕ್ಕಮಗಳೂರಿಗೆ ಹೋದವರಿಗೆ ಅಲ್ಲಿನ ಟ್ರೆಕ್ಕಿಂಗಿನ ಸಮಯದಲ್ಲಿ ಸಿಕ್ಕ ಸರ್ಪದಾರಿ ನೆನಪಿರಬಹುದು. ಅಂತದ್ದೇ , ಅದಕ್ಕಿಂತಾ ಹೆಚ್ಚಿನ ತಿರುವುಗಳಿರುವ ದಾರಿಯೊಂದು ಕುಡುಕು ಮಲೈಯಲ್ಲಿದೆ. ಮಿಡಲ್ ಸ್ಟೇಷನ್ನಿನಿಂದ ಕಾಣೋ ಆ ಸರ್ಪದಾರಿಯ ದೃಶ್ಯ ಅಲ್ಲಿನ ಮೋಡ ಮುಸುಕಿದ ಬೆಟ್ಟಗಳಿಗೆ, ಹಸಿರ ಸಿರಿಗೆ ಮುಕುಟಪ್ರಾಯವಾಗಿದೆ.
Views of Kudukumalai from Middle station
Rotate left to see the Snake curves in Kudukumalai

ಮಿಡಲ್ ಸ್ಟೇಷನ್ನಿನ ಮಗಧೀರ: 
ಹತ್ತೂಕಾಲಿಗೆ ಮಿಡಲ್ ಸ್ಟೇಷನ್ನಿನ ಗುಡಿಯಿಂದ ಹೊರಟಿದ್ದ ನಾವು ಮುಂದಿನ ಕಲ್ಲ ದಾರಿ ಹಿಡಿದೆವು. ಕುರಂಗನಿಯವರೆಗೂ ಟಾರು ರಸ್ತೆಯಿದ್ದರೂ ಅಲ್ಲಿಂದ ಮಿಡಲ್ ಸ್ಟೇಷನ್ನಿಗೆ ಬರಬೇಕೆಂದರೆ ಈ ಕಲ್ಲಿನ ರಸ್ತೆಯಲ್ಲೇ ಬರಬೇಕು. ಆ ರಸ್ತೆಯಲ್ಲೇ ಟಾಪ್ ಸ್ಟೇಷನ್ನಿನಿಂದ ಕುರಂಗನಿಯವರೆಗೂ ಇಲ್ಲಿನ ಗ್ರಾಮಸ್ಥರು ಹತ್ತಿಳಿಯುತ್ತಾರಂತೆ. ಟಾಪ್ ಸ್ಟೇಷನ್ನಿಗೆ ಕೇರಳದ ಮುನ್ನಾರಿನಿಂದ ಟಾರ್ ರಸ್ತೆಯನ್ನೇ ಮಾಡಿದ್ದರೂ ಆ ಕಡೆಯಿಂದ ಬರೋಕೆ ೯೪ ಕಿ.ಮೀ ಅಂತೆ. ಅಷ್ಟೆಲ್ಲಾ ಸುತ್ತಾಡಿ ಬರೋ ಬದಲು ನಡೆಯೋದೇ ವಾಸಿ ಗುರೂ ಅಂತ ಅಲ್ಲಿನವರು ಅಂದುಕೊಂಡಿರಬೇಕು.
Views along the trekking path of Top station

one of the grasslands on the way to top station
This are the views which make you forget all other things
 ಮಿಡಲ್ ಸ್ಟೇಷನ್ನಿನಲ್ಲಿ ಒಂದು ಪೋಸ್ಟಾಪೀಸಿನ ಡಬ್ಬವಿದೆ ಅಂದಿದ್ದೆ. ಇದ್ದರೇನಂತೆ. ಇಲ್ಲಿಗೆ ಬರೋ ಪೋಸ್ಟ್ ಮ್ಯಾನ್ ಯಾರಪ್ಪ ಅಂತ ಯೋಚನೆ ಮಾಡುವಷ್ಟರಲ್ಲೇ ನಮ್ಮ ಹಿಂದಿಂದ ಕುದುರೆಯ ಖರಪುಟ ಕೇಳಿಸ್ತು. ನೋಡಿದ್ರೆ ಒಬ್ಬ ಮಗಧೀರನಂತೆ ಕುದುರೆಯೇರಿ ಬರ್ತಿದ್ದ. ಆತನ ಕೈಯಲ್ಲೊಂದಿಷ್ಟು ಗಂಟುಗಳು. ಸಾಮಾನ್ಯ ಅಂಚೆ ಬಿಡಿ, ನಾಪ್ಟಾಲಿನಂತಹ ಆನ್ ಲೈನ್ ಶಾಪಿಂಗಿನ ವಸ್ತುಗಳನ್ನೂ ಆತ ಮಿಡಲ್ ಸ್ಟೇಷನ್ನಿಗೆ ತಲುಪಿಸುತ್ತಿದ್ದ ! ಆತನಿಗೂ, ಆತನ ಕುದುರೆಗೂ ಸೈಯೆನ್ನದೇ ಇರಲಾಗಲಿಲ್ಲ. 



ಬೆಳಕ ನುಂಗೋ ಸಸ್ಯರಾಶಿಯ ಮಧ್ಯೆ:

ನಿಧಾನವಾಗಿ ಹಸಿರು ಗಾಡವಾಗತೊಡಗಿತ್ತು. ಮಧ್ಯ ಮಧ್ಯ ಬೆಟ್ಟದ ಒರಬಂದು ಸೂರ್ಯನಿಗೆ ಎದುರಾಗುತ್ತಿದ್ದರೂ ಮತ್ತೆ ಗಾಡ ಕಾಡೊಳಗೇ ಹೊಕ್ಕುತ್ತಿದ್ದವು. ಮರೆಯಾಗುತ್ತಿದ್ದ ಮಿಡಲ್ ಸ್ಟೇಷನ್ನಿನ ದೃಶ್ಯಗಳು ಊರು ಹೋಗನ್ನುತ್ತಿತ್ತು, ಕಾಡು ಬಾಯೆನ್ನುತ್ತಿತ್ತು ಅನ್ನುವ ಗಾದೆಯನ್ನು ಮತ್ತೊಂದು ತರದಲ್ಲಿ ಅರ್ಥೈಸಿತ್ತು. ಇಲ್ಲೊಂದಿಷ್ಟು ಶಾರ್ಟ್ ಕಟ್ಟುಗಳು ಸಿಕ್ಕರೂ ಗೈಡಿಲ್ಲದೇ ಹೋದರೆ ಅವುಗಳಲ್ಲಿ ಹೋಗೋ ಬದಲು ಕಲ್ಲ ರಸ್ತೆಯಲ್ಲಿ ಹೋಗೋದೇ ಮೇಲು.
One of the dense forest paths during the trek
An unknown beauty
Time for some beats and steps

ಟಾಪ್ ಸ್ಟೇಷನ್ ಬಂತಪ್ಪ:
ಗುಂಪಿನಲ್ಲಿರೋ ಅತ್ಯಂತ ಮೂರ್ಖ ವ್ಯಕ್ತಿಯೆಂದರೆ ಫೋಟೋಗ್ರಾಫರ್ ಅಂತ ಗೆಳೆಯರತ್ರ ಹೇಳುತ್ತಿದ್ದೆ.ಯಾಕಂದ್ರೆ ಫೋಟೋ ತೆಗೀತಾ ಇರೋನನ್ನ ಹಾಗೇ ಬಿಟ್ಟು ಹೋಗಿಬಿಡ್ತಾರೆ. ಬಿಟ್ಟೋದ್ರಲ್ಲ ಅಂತ ಅವರನ್ನ ಹಿಡಿಯೋಕೆ ಅಂತ ಮುಂದೆ ಮುಂದೆ ಓಡಬೇಕು. ಮತ್ತೆ ಬಿಟ್ಟೋಗದಿರಲಿ ಅಂತ ಮುಂದೆ ಸೇರ್ಕೊಳ್ಳಬೇಕು. ಮುಂದಿನಿಂದ ಮಧ್ಯವಾಗುತ್ತಾ, ಮಧ್ಯದಿಂದ ಹಿಂದಾಗುತ್ತಾ, ಗುಂಪಿನಿಂದ ಹೊರಗುಳಿಯುತ್ತಾ ಮತ್ತೆ ಓಡುತ್ತಾ ಮುಂದೆ ಬರುವಷ್ಟರಲ್ಲಿ ಇದ್ದ ಬದ್ದ ಶಕ್ತಿಯೆನ್ನೆಲ್ಲಾ ಖರ್ಚು ಮಾಡೋ ಅವನಿಗೆ ಮೂರ್ಖನೆನ್ನದೇ ಇನ್ನೇನನ್ನಬೇಕು ಎನ್ನೋ ವಿಚಾರ ಟ್ರಿಪ್ಪಿನಲ್ಲಿ ಹಲವು ಬಾರಿ ನಿಜವಾಗಿತ್ತು. ಗೊತ್ತಿಲ್ಲದ ಸಸ್ಯಗಳ ಒಂದು ಫೋಟೋನೂ ತಗೊಂಡು ಬಂದಿಲ್ಲ ಅಂದ್ರೆ ಹೇಗೆ ಅನ್ನೋ ವಿಚಾರದಲ್ಲಿ, ಪ್ರಮೋದ ಅಥವಾ ವರುಣ ಹಾಕುತ್ತಿದ್ದ ಹಾಡುಗಳಿಗೆ ತಲೆದೂಗುತ್ತಾ, ಕೆಲವು ಕಡೆ ಸ್ಟೆಪ್ಪಾಕುತ್ತಾ ಬರುವಷ್ಟರಲ್ಲಿ ಮತ್ತೊಂದಿಷ್ಟು ಮನೆಗಳು ಕಾಣತೊಡಗಿದ್ವು. ಅಲ್ಲಿ ಮೇಲೆ ಕಾಣ್ತಿದೆಯಲ್ಲ, ಅದೇ ಟಾಪ್ ಸ್ಟೇಷನ್ನು ಅಂದ ಗೈಡು. ಮನೆಯೆಂದರೆ ಅವೆಲ್ಲಾ ಮನೆ ಕಂ ಕಾಟೇಜು ಕಂ ರೆಸಾರ್ಟುಗಳು . ಒಂದು ಕಾಟೇಜಲ್ಲಿ ಕೆಟ್ಟ ಜೀಪೊಂದು ನಿಂತಿತ್ತು.
A jungle resort marking our arrival to top station !
ಇಲ್ಲಿ ಜೀಪು ಹೇಗೆ ಬರೋಕೆ ಸಾಧ್ಯವೆನ್ನುವಷ್ಟರಲ್ಲಿ ಗೈಡು ಕೇರಳದ ಕಡೆಯಿಂದ ಬರೋ ಟಾರ್ ರಸ್ತೆ ತೋರಿಸಿದ ! ಮೇಲೆ ಹೋದಾಗ ಆರಾಮಾಗಿ ಟಿಟಿಯಲ್ಲೋ, ಕಾರಲ್ಲೋ ಬಂದು ಒಂದೂ ಬೆವರ ಹನಿಯಿಲ್ಲದೆ ಅಲ್ಲಿನ ಬೆಟ್ಟಗಳೆದುರು ಪೋಸ್ ಕೊಡುತ್ತಿದ್ದ ಲಲನೆಯರು ಕಂಡಾಗ ಇಷ್ಟೇನಾ ಟಾಪ್ ಸ್ಟೇಷನ್ ಅನಿಸಿಬಿಡ್ತೊಂದು ಸಲ.
View of top station view point from the bottom villages
ಹೊಟ್ಟೆ ಉರಿಸೋಕೆ ಅಂತ ಅಲ್ಲಿ ಲಾಡ್ಜೂ ಇತ್ತು. ಆದರೆ ಸುಲಿಗೆಯ ಪರಮಾವಧಿಯೆನಿಸಿದ್ದ ಅಲ್ಲಿ ಟಾಯ್ಲೇಟಿಗೂ ೧೦ ರೂ ಅಂತ ಬೋರ್ಡಿತ್ತು :-) ಎಂಟೂವರೆ ಸುಮಾರಿಗೆ ಟ್ರೆಕ್ ಶುರುಮಾಡಿದ್ದ ನಾವು ಹನ್ನೆರಡರ ಹೊತ್ತಿಗೆ ಟಾಪ್ ಸ್ಟೇಷನ್ನಿನಲ್ಲಿದ ಚರ್ಚು ಮತ್ತು ಅಭಿ ಹೋಟೇಲ್ ಎದುರಲ್ಲಿದ್ವಿ. ಸಾಮಾನ್ಯವಾಗಿ ನಾಲ್ಕರಿಂದ ಐದು ಘಂಟೆಯ ಹಾದಿ ಅಂತ ಗೈಡ್ ಹೇಳಿದ್ದ ಹಾದಿಯನ್ನ ಮೂರೂವರೆ ಘಂಟೆಯಲ್ಲಿ ಕ್ರಮಿಸಿದ್ವಿ ನಾವು. ಹಿಂಗೆ ಅಂತ ಗೊತ್ತಿದ್ರೆ ಮೊದಲನೇ ದಿನವೇ ಬಂದುಬಿಡಬಹುದಿತ್ತಲ್ಲ ಅನ್ನೋ ಭಾವ ಮತ್ತೆ ಕಾಡಿತು.

Lodges and Restaurant at top station


ಟಾಪ್ ಸ್ಟೇಷನ್ನಿನ ವೀವ್ ಪಾಯಿಂಟು ಮತ್ತು ಸುರಂಗದ ಹಾದಿ: 
ಇಲ್ಲಿ ತಲಾ ೧೦ ರೂ ಕೊಟ್ಟು ನೋಡುವಂತಹ ವೀವ್ ಪಾಯಿಂಟೊಂದಿದೆ. ಅದಕ್ಕೆ ಸಾಗೋ ಮೊದಲು ಒಂದಿಷ್ಟು ಅಂಗಡಿಗಳ ಸಾಲು. ಇಲ್ಲಿ ನೀರು ಸಿಗುತ್ತೆ ಅಂತ ಗೈಡ್ ಹೇಳಿದ್ದು ಬಾಟಲಿಯಲ್ಲಿ ಕೊಳ್ಳಬೇಕಾದ ನೀರು. ಇಲ್ಲಿ ಮಾವಿನಹಣ್ಣು, ಜೋಳಗಳೆಲ್ಲಾ ಇದ್ದರೂ ನಾವು ತಂದಿದ್ದ ಇಡ್ಲಿ, ಸಾಂಬಾರ್, ಚಟ್ನಿಗಳು ಒಂದಿಷ್ಟು ಹೊಟ್ಟೆಗೆ ನೆರವಾದವು
Top station view point
TATA property at TOP station . Path leading to view point resides here !. Proud to be part of the family
Top station streets. Tejas and Bala are in some discussion ;-)
Top station plantations
Ya. Its the view from top station viewpoint !
One more view from the view point
Time for a group pic at top station
ವೀವ್ ಪಾಯಿಂಟಿಗೆ ಹತ್ತಿ ಅಲ್ಲೊಂದಿಷ್ಟು ಫೋಟೋ ತೆಗೆದು, ಅಲ್ಲಿಂದ ಕೆಳಗಿದ್ದ ಸುರಂಗಕ್ಕೆ ಹೋಗೋದಿನ್ನೇನು ಅಂತ ವಾಪಾಸ್ಸಾದ್ವಿ. 
Time to say goodbye to Abi cafe and Top station church
ಘೋರ ಮಳೆಯಲ್ಲಿ, ಮಿಡಲ್ ಸ್ಟೇಷನ್ ಮಧ್ಯದಲ್ಲಿ
ಟಾಪ್ ಸ್ಟೇಷನ್ನಿನ ಮೇಲಿನ ದೃಶ್ಯಗಳಿಗಿಂತ ಹತ್ತೋ ದಾರಿಯೇ ಸುಂದರವೆನ್ನುತ್ತಾ ಒಂದೂಕಾಲಿಗೆ ಅಲ್ಲಿಂದ ಇಳಿಯೋಕೆ ಶುರು ಮಾಡಿದ್ವಿ. ಬೇಗ ಬೇಗ ಇಳಿದ್ರೆ ಜಲಪಾತಕ್ಕೆ ಹೋಗಬಹುದು. ಇಲ್ಲದಿದ್ದರೆ ಇಲ್ಲ ಅಂತ ಹೇಳಿದ್ದರಿಂದ ,ಬೇಗ ಇಳಿದರೆ ಬೆಂಗಳೂರಿಗೆ ಬೇಗ ಹೊರಡಬಹುದೆನ್ನುವ ಐಡಿಯಾದಿಂದ ನಾವೆಲ್ಲಾ ಬೇಗ ಬೇಗ ಇಳಿಯೋಕೆ ಶುರು ಮಾಡಿದ್ವಿ. ಆದರೂ ಮಧ್ಯ ಪ್ರಮೋದನಿಗೆ ಕಾಲು ನೋವು ಶುರುವಾದ್ದರಿಂದ ಇಳಿಯೋದು ಸ್ವಲ್ಪ ನಿಧಾನವಾಯ್ತು. ಬಾಲುವಿನ ಪುರಾಣಗಳು ಬೇರೆ.ಇನ್ನೇನು ಮಿಡಲ್ ಸ್ಟೇಷನ್ ತಲುಪೇ ಬಿಟ್ಟೆವು ಅನ್ನುವ ಹೊತ್ತಿಗೆ ಮಳೆ ಹನಿಯಲು ಶುರುವಾಯ್ತು ನೋಡಿ. ಮೊದಲು ಹಗುರವಾಗಿದ್ದ ಮಳೆ, ಇದ್ದಕ್ಕಿದ್ದಂತೆ ಧಾರಾಕಾರವಾಯ್ತು. ಹಿಂದುಳಿದಿದ್ದವರು, ಹಿಂದೇ ಇದ್ದರು. ಬಿಟ್ಟು ಹೋಗೋದೇನು ಅಂತ ಅಲ್ಲೇ ಇದ್ದ ಅಂಗಡಿಯೊಂದರ ಛಾವಣಿಯಲ್ಲಿ ಕೂತೆವು. ಪ್ರಮೋದ್, ಬಾಲು, ಸಂದೇಶ್ ಗಾಗಿ ಕಾಯ್ತಾ ಕಾಯ್ತಾ ಸಮಯ ಐದಾಯ್ತು, ಹತ್ತಾಯ್ತು. ಅವರ ಸುಳಿವಿಲ್ಲ. ವಾಪಾಸ್ ಹೋಗಿ ನೋಡೋಣವೆಂದರೆ ವಿಪರೀತ ಮಳೆ. ಬರೀ ಮಳೆಯಷ್ಟೇ ಆಗಿದ್ರೆ ಪರವಾಗಿರಲಿಲ್ಲ. ಮರಗಳನ್ನೇ ಬಗ್ಗಿಸುವಷ್ಟು ಜೋರಾದ ಗಾಳಿ. ಗುಡುಗು, ಸಿಡಿಲು. ಈ ಮಳೆಗೆ ಮುಂದೆ ಬರಲಾರದೇ ಯಾವುದೋ ಮನೆಯ ಬಳಿ ನಿಂತಿರಬೇಕು ಅಂದ್ಕೊಂಡ್ವಿ. ಸುಮಾರು ಇಪ್ಪತ್ತು ನಿಮಿಷವಾದ ಮೇಲೆ ಅವರೇ ಆ ಮಳೆಯಲ್ಲಿ ಬಂದ್ರು. ಎಲ್ಲಾ ಬಂದ್ರು ಅಂತ ಮುಂದೆ ಹೊರಡೋಕಾಗುತ್ತಾ ? ಗೈಡಿಗೆ ಕೇಳಿದ್ರೆ ದಿನಾ ಈ ತರದ ಮಳೆ ಬರ್ತಿದೆ ಈಗ ಅಂತಿದ್ದಾನೆ. ಎಷ್ಟೊತ್ತು ಸುರಿಯುತ್ತೆ ಅಂದ್ರೆ ಸಂಜೆಯಾಗಬಹುದು, ರಾತ್ರಿಯೂ ಆಗಬಹುದು ಅಂತಿದ್ದ ಅವ ! ಅದೃಷ್ಟದ ಪರೀಕ್ಷೆ ಅಂತ ಇನ್ನೊಂದು ಸ್ವಲ್ಪ ಹೊತ್ತು ಇಲ್ಲಿ ಕಾಯಲೇಬೇಕು ಅಂದುಕೊಳ್ಳುತ್ತಾ ಅಂಗಡಿಯಲ್ಲಿ ಬೆಚ್ಚಗೆ ಏನಾದ್ರೂ ಸಿಗಬಹುದಾ ಅಂತ ಕಣ್ಣಾಡಿಸತೊಡಗಿದೆವು. ಅಂಗಡಿಯ ಎದುರೇ ಟೈಗರ್ ಬ್ರಾಂಡಿನ ಪುನರ್ಪುಳಿ(ಕೋಕಂ) ಜ್ಯೂಸಿನ ಮಿಕ್ಸಿತ್ತು. ಆದರೆ ಈ ಚಳಿಯಲ್ಲಿ ಪುನರ್ಪುಳಿ ಕುಡಿಯೋರ್ಯಾರು ? ! ಟೀ ಸಿಗುತ್ತಾ ಅಂದರು ಕೆಲವರು.ಅಂಗಡಿಯಾಂಟಿ ಬಿಸಿ ಬಿಸಿ ಬ್ಲಾಕ್ ಟೀ ಮಾಡಿಕೊಂಡು ತಂದು ಕೊಟ್ರು. ಡಾರ್ಜಿಲಿಂಗ್, ಸಿಕ್ಕಿಂನಲ್ಲಿದ್ದಷ್ಟು ದಿನವೂ ಗ್ರೀನ್ ಟೀ, ಬ್ಲಾಕ್ ಟೀಗಳನ್ನೇ ಕುಡಿದು ಬೇಸತ್ತಿದ್ದ ನಾನು ಬ್ಲಾಕ್ ಟೀ ಬೇಡವೆಂದೆ. ಅಲ್ಲಿ ೫ ರೂಗೆ ಒಂದು ಕಪ್ ಟೀ, ೩ ರೂಗೆ ಒಂದು ಸಣ್ಣ ಪ್ಯಾಕೆಟ್ ಕುರುಕುರೆ ಚಿಪ್ಸ್ ! ಎಲ್ಲಾ ಸೇರಿ ಬಿಲ್ಲಾಗಿದ್ದು ೩೯ ರೂ. ಯಾರಿಗುಂಟು ಯಾರಿಗಿಲ್ಲಾ ಗುರೂ ? ಚಳಿಗಾಳಿಗೆ ನಡುಗುತ್ತಿದ್ದ ಹುಡುಗರೆಲ್ಲಾ ಆ ಅಂಗಡಿಯಲ್ಲಿದ್ದ ಏಳೆಂಟು ವರ್ಷದ ಹುಡುಗ ಒಂಚೂರೂ ನಡುಗದ್ದನ್ನು ಕಂಡು ಅದೇಗಪ್ಪಾ ಹಂಗಿರ್ತೀಯ, ಎಲ್ಲಿ ಶಾಲೆಗೆ ಹೋಗ್ತೀಯ ಅಂತೆಲ್ಲಾ ಪ್ರಶ್ನಿಸತೊಡಗಿದ್ರು. ಆತ ಅಲ್ಲೇ ಗುಡ್ಡದ ಶಾಲೆಗೆ ಹೋಗ್ತೀನಂತ್ಲೂ ಈಗ ಎರಡನೇ ಕ್ಲಾಸಂತ್ಲೂ ಹೇಳಿದ್ದಷ್ಟೇ ಅರ್ಥವಾಯ್ತು. ಅಲ್ಲಿದ್ದ ನಾಯಿಯ ಕುಯ್ಗುಟ್ಟುವಿಕೆ, ಕಾಲು ನೆಕ್ಕುವಿಕೆಗೆ ಮನಸೋತಿದ್ದ ವರುಣನಲ್ಲಿದ್ದ ಪ್ರಾಣಿ ಪ್ರೇಮ ಜಾಗೃತವಾಗಿ ಆತ ನಾಯಿಗೇ ಅಂತ್ಲೇ ಬಿಸ್ಕೇಟು ತಗೊಂಡು ಹಾಕುವಷ್ಟರಲ್ಲಿ ನಮ್ಮೊಟ್ಟಿಗೇ ಬಂದಿದ್ದ ಅಜ್ಜನೊಬ್ಬ ತನ್ನ ಪ್ಲಾಸ್ಟಿಕ್ ಕವರ್ ತೆಗೆದ. ಅದರ ತುಂಬೆಲ್ಲಾ ನೂರರ ಅದೆಷ್ಟೋ ನೋಟುಗಳು !ಮನೆಯಲ್ಲಿ ಯಾವುದೋ ಕಾರ್ಯಕ್ರಮಕ್ಕೆ ಹಂಚೋಕೆಂತ ತಂದ ಹತ್ತರ, ಐದರ ನೋಟುಗಳನ್ನು ನೋಡುವಷ್ಟೇ ಸಹಜವಾಗಿ ಆ ಅಜ್ಜ ತನ್ನ ನೂರರ ಬಂಡಲಲ್ಲಿದ್ದ ನೋಟುಗಳನ್ನ ನೋಡುತ್ತಿದ್ದುದನ್ನು ನೋಡಿ ಒಮ್ಮೆ ಗಾಬರಿಯಾಯ್ತು. ಎರಡು ಚಕ್ರದ ಒಂದು ಗಾಡಿಯೂ ಬರಲಾಗದ ಆ ಊರಿನಲ್ಲಿ ಈ ರೇಂಜಿನ ದುಡ್ಡಿನೊಂದಿಗೆ ಸಾಮಾನ್ಯದಲ್ಲೇ ಸಾಮಾನ್ಯ ವೇಷಭೂಷಣಗಳೊಂದಿಗೆ ಓಡಾಡುತ್ತಿದ್ದ ಆ ಅಜ್ಜನನ್ನು ಕಂಡಿದ್ದು ಎಲ್ಲಿಂದಲೂ ಬಂದ ಮಳೆಯಲ್ಲಿ ಸಿಕ್ಕಷ್ಟೇ ಆಶ್ಚರ್ಯವಾಗಿತ್ತು.  ಆ ಅಂಗಡಿಯವರೊಂದಿಗೆ ಏನೋ ಡೀಲ್ ಮಾಡ್ತಿದ್ದ ಅಜ್ಜ ನಮಗೆ ನಡೆದಾಡೋ ಗುಡ್ಡದ ಭೂತದಂತೆ ಕಾಣದಿದ್ದರೂ, ಸಂಚಾರಿ ಏಟಿಎಂ ನಂತೆ ಖಂಡಿತಾ ಕಂಡ !

ಮಿಸ್ಸಾದ ಡ್ರೈವರಿಗಾಗಿ ಶಾರ್ಟ್ ಕಟ್
ಒಂದು ಘಂಟೆಯಾದರೂ ಮಳೆ ನಿಲ್ಲಲಿಲ್ಲ. ನಿಲ್ಲೋ ಲಕ್ಷಣಗಳೂ ಕಾಣದಿದ್ದಾಗ ಅದೇ ಮಳೆಯಲ್ಲಿ ಮುಂದೆ ಹೊರಟೆವು. ಸ್ವಲ್ಪ ದೂರ ಹೋಗುತ್ತಿದ್ದಂತೆ ಕಮ್ಮಿಯಾದ ಮಳೆಗೆ ಖುಷಿಪಟ್ಟು ಇನ್ನೂ ಚುರುಕಾಗಿ ಹೆಜ್ಜೆ ಹಾಕಿದೆವು. ನಮ್ಮ ಚುರುಕು ಹೆಜ್ಜೆಗಳಿಂದ ಹೊಟ್ಟೆಕಿಚ್ಚಾಯಿತೋ ಎಂಬಂತೆ ಮಳೆ ಉಧೋ ಎಂದು ಮತ್ತೆ ಶುರುವಾಯ್ತು. ಹಿಂದಿದ್ದ ಸಂದೇಶ, ಪ್ರಮೋದ, ಬಾಲು, ವರುಣ, ಹೆಗ್ಡೆ,  ಮತ್ಯಾವುದೋ ಕಲ್ಲ ಬಂಡೆಯ ಹಿಂದೆ ನಿಂತರೂ ನಾವು, ಇಲ್ಲಿ ನಿಂತು ಉಪಯೋಗವಿಲ್ಲವೆಂದು ಮುಂದೆ ಸಾಗಿದೆವು. ಅಲ್ಲಿನ ಮುಸಲಧಾರೆಯೆದುರು ಯಾವ ಕಲ್ಲ ಕೆಳಗೆ ನಿಂತರೂ ಒದ್ದೆಯಾಗೋದೇನು ತಪ್ಪುತ್ತಿರಲಿಲ್ಲ. ಸ್ವಲ್ಪ ಮುಂದೆ ಹೋಗಿ  ಸ್ವಲ್ಪ ಹೊತ್ತು ಕಾಯ್ತಿದ್ವಿ. ಅವರು ಮುಂದೆ ಬಾರದಿದ್ದರೂ ವರುಣ್, ಸಂದೇಶ್ ಮುಂದಾದ್ರು. ಮತ್ತೆ ಹಿಂದುಳಿದ ಮೂವರಿಗೆ ಸ್ವಲ್ಪ ಹೊತ್ತು ಕಾದರೂ ಅವರು ಬಾರದಿದ್ದಾಗ ಜಲಪಾತದವರೆಗೆ ಹೋಗಿ ಅಲ್ಲಿ ಕಾಯೋದೆಂದು ನಿಶ್ಚಯಿಸಿ ಮುಂದಡಿಯಿಡೋಕೆ ಶುರು ಮಾಡಿದ್ವಿ. ಅಲ್ಲಿ ಹಾಕಿದ್ದ ಕಲ್ಲುಗಳು ಮತ್ತು ಮುಂಭಾಗ ವಾಟರ್ ಪ್ರೂಫಾಗಿದ್ದ ನನ್ನ ಶೂವಿನ ಕಾರಣದಿಂದ ಆ ಮಳೆಗೂ ದಾರಿಯಲ್ಲಿ ಎಲ್ಲೂ ಜಾರಲಿಲ್ಲ. ಹಾಗೇ ನಡೆ ನಡೆದು ಫಾಲ್ಸೇನೋ ಸಿಕ್ಕಿತು. ಆದರೆ ಅದರ ಬುಡಕ್ಕೆ ಸಾಗೋದು ಕಷ್ಟವಾಗಿತ್ತು. ವರುಣ , ಸಂದೇಶ್ ಸ್ವಲ್ಪ ಪ್ರಯತ್ನ ಪಟ್ಟರೂ ಮುಂದೆ ಅಪಾಯವೆಂದು ಅವರನ್ನು ವಾಪಾಸ್ ಕರೆದ್ವು. ಅಲ್ಲೇ ಬಂಡೆಯ ಮೇಲಿದ್ದ ರಾಮನ ಪಾದ ಮುಂತಾದ ಕೆತ್ತನೆಗಳನ್ನು ನೋಡುತ್ತಾ ಸೊಂಟದವರೆಗೂ ಬರುತ್ತಿದ್ದ ನೀರಲ್ಲಿ ಆಡುತ್ತಿದ್ದಾಗ ಉಳಿದವರೂ ಬಂದು ಸೇರಿಕೊಂಡರು. ಮಳೆಯಲ್ಲಿ ಒದ್ದೆಯಾಗಿದ್ದರೂ ನೀರಲ್ಲಾಡದೇ ಇರೋ ಮನಸ್ಸು ಯಾರಿಗೂ ಇರಲಿಲ್ಲ. ಅಲ್ಲೊಂದು ಸ್ವಲ್ಪ ಹೊತ್ತು ಆಡಿ ಮತ್ತೆ ಮೇಲೆದ್ದು ಕೆಳಗಿನ ಜಾಗದತ್ತ ತೆರಳಿದೆವು. ಐದರ ಹೊತ್ತಿಗೆ ಕೆಳಗಿಂದ ನಾವು ಟಿಕೇಟ್ ತಗೊಂಡ ಜಾಗಕ್ಕೆ ಬಂದು ನೋಡಿದ್ರೆ ಅಲ್ಲಿ ನಮ್ಮ ಗಾಡಿಯೂ ಇಲ್ಲ. ಡ್ರೈವರನೂ ಇಲ್ಲ. ಇಲ್ಲಿಂದ ಕೆಳಗೆ ಬರೀ ಐದು ನಿಮಿಷದ ಶಾರ್ಟ್ ಕಟ್ಟಿದೆ ಅಂತ ಗೈಡ್ ಹೇಳ್ತಿದ್ರೂ ಇನ್ನೂ ಮೇಲೇ ಇದ್ದ ಉಳಿದವರಿಗೆ ಕಾಯದೇ ವಿಧಿಯಿಲ್ಲ. ಅವರು ಬರೋ ಹೊತ್ತಿಗೆ ಮತ್ತೆ ೨೦ ನಿಮಿಷ ಆಗಿತ್ತು. ಅಷ್ಟರೊಳಗೆ ಅದೇ ರಸ್ತೆಯಲ್ಲಿ ಮೇಲಿಂದ(ಮೇಲೆ ಹಾಗೇ ಹೋದರೆ ಆದಿಯಾಸಿಗಳ ತಾಂಡಾವೊಂದಿದೆಯಂತೆ. ಅಲ್ಲಿಗೆ ಅರಣ್ಯ ಇಲಾಖೆಯ ಅನುಮತಿ ಪಡೆದು ಹೋಗಬಹುದಂತೆ) ಬರುತ್ತಿದ್ದ ಗಾಡಿಯವರತ್ರ ನಮ್ಮ ಇನ್ನೋವ ಮೇಲೆಲ್ಲೂ ಸಿಗದ ಬಗ್ಗೆ ಖಾತ್ರಿ ಮಾಡಿಕೊಂಡು ಕೆಳಗೆ ಸಿಗೋ ಕೆ.ಎ. ೦೫ ರಿಜಿಸ್ಟ್ರೇಷನ್ನಿನ ಇನ್ನೋವಕ್ಕೆ ಮೇಲೆ ಬರೋಕೆ ಹೇಳಿ ಅಂತ ಹೇಳಿದ್ವಿ ! ಹೀಗೆ ಎರಡು ಮೂರು ಗಾಡಿಗಳವರತ್ರ ಹೇಳಿದ್ರೂ ನಮ್ಮ ಗಾಡಿ ಮೇಲೆ ಬರಲಿಲ್ಲ.  ಮೇಲಿನವ್ರು ಕೆಳಗೆ ಬಂದ ತಕ್ಷಣ ಇನ್ನು ಇಲ್ಲಿ ಕಾದು ಉಪಯೋಗವಿಲ್ಲವೆಂದು ಅವನು ತೋರಿಸಿದ ದಾರಿಯಲ್ಲಿ ಕೆಳಗಿಳಿಯತೊಡಗಿದ್ವಿ. ಕೆಳಗಿಳಿಯುತ್ತಿದ್ರೂ ಅವ ಅಪ್ಪಿ ತಪ್ಪಿ ಮೇಲೆ ಹೋಗಿ ಬಿಟ್ರೆ ಅಂತ ಅನುಮಾನ ! ಎರಡು ಮೂರು ಸಲ ಮುಖ್ಯ ರಸ್ತೆಗೆ ತಾಗಿ ಮತ್ತೆ ತೋಟದೊಳಗೆ ಇಳಿಯುತ್ತಿದ್ದ ಆ ಕಾಡಹಾದಿಯಲ್ಲಿ ಒಮ್ಮೆ ಇಲ್ಲೇ ನೋಡೋಣ ಸ್ವಲ್ಪ ಹೊತ್ತು ಅಂದೆನಿಸಿ ಗೈಡಿಗೆ ಎರಡು ನಿಮಿಷ ತಡಿ ಅಂದೆ. ಹಿಂದಿದ್ದವರು ಅಲ್ಲಿಗೆ ಬಂದು ಸ್ವಲ್ಪ ಸುಧಾರಿಸಿಕೊಳ್ಳೋಕೂ ಕೆಳಗಿಂದ ನಮ್ಮ ಇನ್ನೋವ ಅಲ್ಲಿಗೆ ಬರೋಕೂ ಸರಿಯಾಯ್ತು ! ಇದಕ್ಕೆ ಆರನೆಯ ಇಂದ್ರಿಯ ಅನ್ನಬೇಕೋ, ಕಾಕತಾಳೀಯ ಅನ್ನಬೇಕೋ ಗೊತ್ತಿಲ್ಲ. ಒಟ್ನಲ್ಲಿ ಗಾಡಿ ಸಿಕ್ಕಿತು. ಗೈಡಿಗೆ ಅವನ ದುಡ್ಡು ಕೊಟ್ಟು, ಅವನೂರಾದ ಕುರಂಗನಿಯವರೆಗೂ ಬಿಟ್ಟು ಬೋಧಿಯ ಹಾದಿ ಹಿಡಿಯೋ ಹೊತ್ತಿಗೆ ಘಂಟೆ ಐದೂಮುಕ್ಕಾಲಾಗುತ್ತಾ ಬಂದಿತ್ತು .

ಮುಗಿಸೋ ಮುನ್ನ:
ಮುಂದಿನ ಬಾರಿ ಈ ಡ್ರೈವರಿಲ್ಲದೇ ಬರಬೇಕು. ಕುಡುಕುಮಲೈ ಕವರ್ ಮಾಡಿ ಇಲ್ಲಿನ ಹತ್ತಿರದ ಇನ್ಯಾವುದಾದರೂ ಜಾಗ ನೋಡಬೇಕು ಅನ್ನೋ ನಿರ್ಣಯ ಮಾಡಿ ಕುರಂಗನಿಯಿಂದ ಹೊರಟು ಬೋದಿಗೆ ಬಂದ್ವಿ. ಅಲ್ಲಿ ಹತ್ತೇ ನಿಮಿಷದಲ್ಲಿ ಚೆಕ್ ಔಟ್ ಮಾಡಿ ಮುಂದೆ ಸಾಗಿದ್ರೂ ನಮಗೆ ಮಳೆಯ ಕಾಟ ತಪ್ಪಿರಲಿಲ್ಲ. ಥೇನಿ ದಾಟುವಷ್ಟರಲ್ಲಿ ಧಾರಾಕಾರ ಆಲಿಕಲ್ಲಿನ ಮಳೆ ಶುರುವಾಯ್ತು. ಎದುರಿಗಿನ ದಾರಿ ಏನೂ ಕಾಣದಷ್ಟು ಧಾರಾಕಾರ ಮಳೆ. ಇವತ್ತು ಊಟವೇ ಇಲ್ಲವೇನೋ ಅಂತ ಸುಮಾರು ಒಂದು ತಾಸು ರಸ್ತೆಬದಿ ಗಾಡಿ ನಿಲ್ಲಿಸಿಕೊಂಡು ಕೂತಿದ್ದ ಮೇಲೆ ಮಳೆ ಸ್ವಲ್ಪ ಕಡಿಮೆಯಾಯ್ತು. ಅದರಲ್ಲೇ ಮುಂದೆ ಸಾಗಿ ಎದುರಿಗೆ ಸಿಕ್ಕ ಡಾಬಾವೊಂದನ್ನು ಹೊಕ್ಕೋ ಹೊತ್ತಿಗೆ ಘಂಟೆ ಎಂಟು ದಾಟಿತ್ತು. ಆ ಡಾಬಾವೋ ಕೆಂಪು ನೀರಿನ ಮಧ್ಯದ ಗಡ್ಡೆಯಂತೆ ಕಾಣುತ್ತಿತ್ತು. ಅಲ್ಲೊಂದಿಷ್ಟು ಹೊತ್ತು ಕಾದು, ಅರ್ಜೆಂಟಾದವರ ಕೆಲಸಗಳನ್ನ ಮುಗಿಸಿಕೊಂಡು, ಊಟವನ್ನೂ ಮುಗಿಸಿ ಹೊರಟಾಗ ಘಂಟೆ ಒಂಭತ್ತು. ಮೊದಲ ಭಾಗದಲ್ಲೇ ಹೇಳಿದಂತೆ ಡ್ರೈವರನ ಗಲಾಟೆಯಿಂದ, ದುಡ್ಡಿರದ ಏಟಿಮಂಗಳಿಂದ ನಾವು ಮೂರಕ್ಕೆ ಬೆಂಗಳೂರು ತಲುಪಿದರೂ ಡ್ರೈವರನ್ನ ಕಳಿಸಿ ಮನೆ ತಲುಪೋ ಹೊತ್ತಿಗೆ ನಾಲ್ಕಾಗಿತ್ತು. ಆನ್ ಲೈನ್ ಟ್ರಾನ್ಸ್ ಫರಿಗೆ ಡ್ರೈವರನ, ಟ್ರಾವೆಲ್ ಏಜಂಟನ ಒಪ್ಪಿಸೋಕಿಂತ ಅವರ ಸುಲಿಗೆಗಳಿಂದ ಹೊರಬರೋದು ಹೇಗನ್ನೋ ಗಲಾಟೆಗಳೇ ಜಾಸ್ತಿಯಾಗಿತ್ತು. ಮೂರು ದಿನಗಳ ಪ್ರವಾಸದಲ್ಲಿ ಅಂದುಕೊಂಡ ಜಾಗಗಳನ್ನೆಲ್ಲಾ ನೋಡಲಾಗದಿದ್ದರೂ ಮುಂದಿನ ಟ್ರಿಪ್ಪು ಹೇಗೆ ಮಾಡಬಾರದು, ಮಾಡಬೇಕೆನ್ನೋ ಒಳ್ಳೊಳ್ಳೆಯ ಪಾಟಗಳು ಸಿಕ್ಕಿದ್ವು.


ಮುಂದಿನ ಬಾರಿ ಇಲ್ಲಿಗೆ ಟ್ರಿಪ್ ಹೋಗೋರ ನೆರವಿಗಾಗಿ
ಟಾಪ್ ಸ್ಟೇಷನ್  ಗೈಡ್, ಸದ್ಯಕ್ಕೆ ಐಟಿಐ ಓದುತ್ತಿರೋ, ರಜೆಯಲ್ಲಿ ಗೈಡಾಗಿರೋ ಶಿವ: ೯೦೮೭೮೨೪೦೬೫
ಟಾಪ್ ಸ್ಟೇಷನ್ನಿನ ಟೆಂಟು ಮುಂತಾದ ವ್ಯವಸ್ಥೆ ಮಾಡೋ ಸತೀಶ್ : ೮೭೫೪೮೦೮೦೮೧
ಟ್ರಿಪ್ಪ ತುಂಬಾ ಸೆಖೆ, ರೋದನೆ ಕೊಟ್ಟು, ಇನ್ಮೇಲೆ ಇವನ ಜೊತೆ ಯಾವತ್ತೂ ಬರಬಾರದು ಅಂತ ತೀರ್ಮಾನ ಕೈಗೊಳ್ಳುವಂತೆ ಮಾಡಿದ ಡ್ರೈವರ್ ಮಹೇಶ್ :೯೯೪೫೭೪೭೫೩೪
ಡ್ರೈವರ್ ಈ ರೇಂಜಿಗೆ ರೋದನೆ ಕೊಟ್ರೂ ಒಂಚೂರೂ ಸಹಾಯ ಮಾಡದ, ನೀವು ನೀವೇ ಸೆಟ್ಲ್ ಮಾಡ್ಕೊಳ್ರಿ ಅಂತ ನಡುನೀರಲ್ಲಿ ಕೈಬಿಟ್ಟ ಟ್ರಾವೆಲ್ ಏಜೆಂಟ್ ಸ್ವಾಮಿ: ೯೯೦೦೧೪೭೫೪೭

No comments:

Post a Comment