Wednesday, November 30, 2016

ಸಲಿಲಕ್ಕೊಂದು ಸಾಲು

ಕಪಿಲ ಮುನಿಯ ಶಾಪದಿಂದ ದಹಿಸಿದಂತ ಸಗರರನ್ನು
ಉದ್ದರಿಸಲು ಬೇಕಾದಳು ದೇವನದಿ ಮಂದಾಕಿನಿ
ಭಗೀರಥನ ಛಲಕೆ ಮೆಚ್ಚಿ ಧರೆಗೆ ಧುಮುಕೊ ಗಂಗೆಯನ್ನು
ಕೊಚ್ಚದಂತೆ ತಡೆಯಲಂದು ಮುಂದೆ ಬಂದ ಫಾಲಾಕ್ಷನೆ|1
 
ತ್ರಿನೇತ್ರನ ಜಟೆಗಳಿಂದ ಧುಮ್ಮಿಕ್ಕಿದ ತಾಯೆ
ಜಹ್ನು ಮುನಿಯ ಕಿವಿಗಳಿಂದ ಹೊರಹೊಮ್ಮಿದ ಮಾಯೆ
ಯಮುನೆ, ಕೋಸಿ, ಗೋಮ್ತಿಯಾಗಿ
ಗಂಡಕಿ, ಗಂಗಾರೆಯಾಗಿ
ಮೋಕ್ಷವೀಯೋ ಕಾಶಿಯಾಗಿ
ಧಾಮ ವಾರಣಾಸಿಯಾಗಿ
ಹರಪ್ಪಾ-ಮೊಹೆಂಜೊದಾರೋ ಬೆಳೆಸಿ ನಿಂತ ತಾಯೆ
ಭರತಖಂಡ ಬೆಳೆಯಲೆಂದು ಹರಸುತ್ತಿಹ ತಾಯೆ|2

ಹರಸೆಲೆಮ್ಮ ವರದೆಯಾದೆ
ಕುಡಿಯಲೆಂದೆ ತುಂಗೆಯಾದೆ
ಬೆಳಕೀಯಲು ಶರಾವತಿ, ಭತ್ತಕೆಂದು ಗಂಗಾವತಿ
ಅರ್ಕಾವತಿ,ನೇತ್ರಾವತಿ,ವೇದಾವತಿ, ಹೇಮಾವತಿ,
ಭದ್ರೆ,ಕೃಷ್ಣೆ, ಕಾವೇರಿಯು
ಮಲಪ್ರಭಾ, ಕಾಳಿ ನೀನು
ಮಹದಾಯಿಯ ಮಡಿಲಿನಲ್ಲಿ, ಮಲಪ್ರಭೆಯ ನೆನಪಿನಲ್ಲಿ
ಅಸಂಖ್ಯಾತ ಕೊಳ್ಳದಲ್ಲಿ, ಹೆಸರಿಲ್ಲದ ಹಳ್ಳದಲ್ಲಿ
ಹರಿಯುತಿರುವ ಜೀವ ತೊರೆಯೆ, ಜೀವಸೆಲೆಯೆ ತಾಯೆ|3

ಬರ ಬಂದಿದೆ ನಾಡಿಗಿಂದು, ನಿನಗೆಂದೇ ಜಗಳವಿಂದು
ಒಣಗುತ್ತಿವೆ ನೀರಿಲ್ಲದೆ ಎಲ್ಲೆಡೆಯೂ ಫಸಲು
ಬತ್ತುತಿರುವ ಹೊಳೆಗಳೆಲ್ಲ, ಒಣಗುತಿರುವ ಕೆರೆಗಳೆಲ್ಲ
ತುಂಬಿ ಉಕ್ಕಿ ಹರಿದರೇನೆ ನಮಗೆ ಹರಷದೊನಲು|4


ಕೊರಗುತಿಹುದು ಬಾಗೀನವು ಒಣಗಿದೆಲ್ಲ ನದಿಯ ಕಂಡು
ಮೀನಿಲ್ಲದೆ, ನೀರಿಲ್ಲದೆ ಸಾಯುತಿಹುದು ಖಗದ ಹಿಂಡು
ಜಲಾಶಯವೆ ನೀರಿಲ್ಲದೆ ಬತ್ತಾಗಿದೆ ಕ್ರೀಡಾಂಗಣ
ನೀರಿಲ್ಲದೆ ಸತ್ತು ಪ್ರಾಣಿ, ಕಾಡೆಲ್ಲವೂ ಬಣ ಬಣ|5

ಬರವೆಂಬುವ ಕೊಡಲಿಯಿಂದ ಕೊಲ್ಲದಿರೇ ತಾಯೇ
ನಮ್ಮಿಂದಲೇ ಜಗವು ಎಂಬ ಭ್ರಾಂತಿ ಪೊರೆಯ ಹರಿಯೆ
ಕೋಪ ಮರೆತು, ಕರುಣೆ ತೋರೆ, ಜೀವವೀಯೊ ತಾಯೆ
ನೀನೇ ನಮಗೆಲ್ಲಾ ಇಂದು. ತುಂಬಿ ಹರಿಯೆ ತೊರೆಯೇ|6
ತುಂಬಿ ಹರಿವ ಕೊಳ್ಳಕಿಂದು ಬಾಗೀನದ ಸ್ಪರ್ಷ
ಒಳ್ಳೆ ಬೆಳೆಯು ಕೈಗೆ ಬಂದು ಬೆಳೆದವನಿಗೆ ಹರ್ಷ
ಹೀಗೇ ಇರಲಿ ಎಂದೆದಿಗೂ ತಾಯೆ ನಿನ್ನ ಕರುಣೆ
ನಮ್ಮಿಂದಿಗೆ, ನಾಳೆಗಳಿಗೆ ಬಾರದಿರಲಿ ಬವಣೆ |7


ಈ ಕವನವನ್ನು ನವೆಂಬರ್ ೨೬ರಂದು ನಡೆದ 3k ರಾಜ್ಯೋತ್ಸವ ಸಂದರ್ಭದಲ್ಲಿ ನಡೆದ ಕವಿಗೋಷ್ಠಿಯಲ್ಲಿ ವಾಚಿಸಲ್ಪಟ್ಟಿದ್ದು, ಅಭಿನಂದನಾ ಪತ್ರವನ್ನು ಪಡೆದಿದೆ

No comments:

Post a Comment