Sunday, June 23, 2013

ಇಕ್ಕೇರಿ

ಈ ಹಿಂದೆ ಪಂಜುವಿನಲ್ಲಿ ಇಕ್ಕೇರಿ ಬಗ್ಗೆ ಬರ್ದಿದ್ದೆ. ಅದಾದ ಮೇಲೆ ಊರಿಗೆ ಹೋದಾಗ ಮತ್ಯಾಕೋ ಇಕ್ಕೇರಿಗೆ ಹೋಗೋ ಮನಸ್ಸಾಯ್ತು. ಹೋದಾಗ ಬರಿದೇ ಹೋಗಿದ್ದ ಅನೇಕ ಮಾಹಿತಿಗಳೂ ಸಿಕ್ವು. ಅದನ್ಯಾಕೆ ಹಂಚಿಕೊಳ್ಳಬಾರ್ದು ಅನಿಸ್ದಾಗ ಮೂಡಿದ್ದೇ ಈ ಲೇಖನ. ಲೇಪಾಕ್ಷಿಯ ಬಗ್ಗೆ ಬರೆದ್ಮೇಲೆ ಯಾಕೋ ಪ್ರವಾಸಕಥನ ಬರೆಯೋ ಮನಸ್ಸೇ ಇರ್ಲಿಲ್ಲ :-( ಆದ್ರೂ ಇಕ್ಕೇರಿಯ ಬಗೆಗಿನ ಚಿತ್ರಗಳೇ ಇದನ್ನು ಬರೆಸಿದವು ಅಂದ್ರೆ ತಪ್ಪಾಗಲಿಕ್ಕಿಲ್ಲವೇನೋ :-) ಮುಂಚಿನ ಲೇಖನವನ್ನೇ ಸ್ವಲ್ಪ ಉತ್ತಮಪಡಿಸೋ ಪ್ರಯತ್ನ ಅಂತ್ಲೂ ಹೇಳ್ಬಹುದೇನೋ ಇದನ್ನ..


ಸಾಗರಕ್ಕೆ ಬಂದೋರಾಗಿದ್ರೆ "ಕೆಳದಿ-ಇಕ್ಕೇರಿ: ಅನ್ನೋ  ಹೆಸರು ಕೇಳಿರ್ಬೇಕಲ್ವಾ . ಕೇಳಿದ್ರೂ  , ಕೇಳ್ದೇ ಇದ್ರೂ ಪ್ರತೀ ಬಾರಿ ಅಲ್ಲಿಗೆ ಹೋದಾಗ್ಲೂ ಒಂತರಾ ಹೊಸ ಅನುಭವ. ಹಾಗಾಗಿ ಒಂದ್ಸಲ ಅಲ್ಲಿಗೇ ಹೋಗ್ಬರೋಣ.  ಸಾಗರಕ್ಕೆ ಸಾಗರ ಅಂತ ಹೆಸರು ಬಂದಿದ್ದೇ ಕೆಳದಿ ಮತ್ತು ಇಕ್ಕೇರಿ ಇಂದ ಅಂತೆ.  ಇಕ್ಕೇರಿ ೧೫೬೦ ರಿಂದ ೧೬೪೦ ರ ವರೆಗೆ ಕೆಳದಿ ಅರಸರ ರಾಜಧಾನಿಯಾಗಿತ್ತಂತೆ. ಆ ಕಾಲದಲ್ಲಿ ಕೆಳದಿ-ಇಕ್ಕೇರಿಗಳ ಮಧ್ಯೆ ಒಂದು ಪಟ್ಟಣವನ್ನು ಕಟ್ಟಬೇಕೆಂಬ ರಾಜಾಜ್ನೆಯಂತೆ ಸಾಗರವನ್ನು ಕಟ್ಟಲಾಯಿತಂತೆ. ಹಾಗಾಗಿ ಇವೆರಡರ ಮಧ್ಯದಲ್ಲಿರುವ ಸಾಗರದಿಂದ ಕೆಳದಿ ಇಕ್ಕೇರಿಗಳಿಗೆ ಏಳು ಕಿ.ಮೀ ದೂರ.

ಸಾಗರದಿಂದ ಇಕ್ಕೇರಿಗೆ ಸಾಗ್ತಾ ಮೊದಲು ಸಿಗೋದೊಂದು ಕೆರೆ, ಬಲಗಡೆ ಅಡಕೆ ತೋಟಗಳು. ಕೆರೆ ಏರಿ ದಾಟ್ತಿದ್ದ ಹಾಗೇ ಸಿಗೋದು ಇಕ್ಕೇರಿ ಅಘೋರೇಶ್ವರ ದೇಗುಲದ ಪ್ರಾಂಗಣ. ಮೆಟ್ಟಿಲುಗಳನ್ನೇರಿ, ಗೇಟು ದಾಟೋವರೆಗೂ ಒಳಗಡೆ ಏನಿದೆ ಅನ್ನೋದು ಕಾಣದಷ್ಟು ಎತ್ತರದಲ್ಲೇ ಇದೆ ಪ್ರಾಂಗಣ. ಅಲ್ಲಿ ನಮ್ಮನ್ನ ಸ್ವಾಗತಿಸೋದೊಂದು ದೊಡ್ಡ ಮಂಟಪ. ಅದರಲ್ಲಿ ಎರಡಾಳೆತ್ತರದ ನಂದಿ ಕುಳಿತಿದ್ದಾನೆ. ಇದು ನಮ್ಮದೇ ಊರಾದ ಕಾರಣ ಸಣ್ಣವನಿದ್ದಾಗಿನಿಂದಲೂ ಆಗಾಗ ಹೋಗುತ್ತಿದ್ದೆ. ಆಗೆಲ್ಲಾ ಈ ನಂದಿಯ ಕಾಲ ಕೆಳಗೆ ನುಸುಳೋದೊಂದು ಆಟ ನಮಗೆ.ಇಲ್ಲಿ ಬರೋ ಮಕ್ಕಳಿಗೆಲ್ಲಾ ಈಗಲೂ ಒಂದು ಖುಷಿ ಅದು.

ಹಾಗೆಯೇ ನಂದಿಗೊಂದು ಕೈ ಮುಗಿದು ಮುಂದೆ ಬರುತ್ತಿದ್ದಂತೆ ಅಘೋರೇಶ್ವರನ ದೇಗುಲ ಸಿಗುತ್ತದೆ. ಉತ್ತರ-ದಕ್ಷಿಣ ದಿಕ್ಕಿಗೆ ಮುಖ ಮಾಡಿದ ಈ ದೇಗುಲದ ಶೈಲಿ ಸ್ವಲ್ಪ ವಿಶಿಷ್ಟವಾಗಿದೆ. ವಿಜಯನಗರದ ಅರಸರಿಂದ ಹಿಡಿದು, ಹೊಯ್ಸಳ-ಚಾಲುಕ್ಯ, ನಂತರ ಬಂದ ಡೆಕ್ಕನ್ ಸುಲ್ತಾನರ ಶಿಲ್ಪಕಲೆಯ ಮಿಶ್ರಣ ಇಲ್ಲಿದೆಯಂತೆ.ಉದಾಹರಣೆಗೆ ಮೊದಲು ಸಿಗುವ ನಂದಿ ಮಂಟಪ. ಆರು ಬಾಗಿಲುಗಳಿರುವ ಈ ಮಂಟಪದ ವಿನ್ಯಾಸ ಮುಸ್ಲಿಂ ಶೈಲಿಯಲ್ಲಿದೆ. ಇದ ಕೋನಾಕೃತಿಯ ಬಾಗಿಲುಗಳು, ಕಮಲಗಳಂತಹ ಮೇಲ್ಚಾವಣಿ, ಗುಂಬಜ್ದಂತಹ ರಚನೆಗಳಿಗೆ ಕಮಲಿನೀ ಮಹಲ್ ಅನ್ನುತ್ತಾರಂತೆ :-)
 

ಅಕ್ಕ ಪಕ್ಕ ಪರಿವಾರ ದೇವತೆಗಳ ಗುಡಿಯಿರುವ ಈ ದೇಗುಲ ಗರ್ಭಗೃಹ, ಅರ್ಧಮಂಟಪ, ಮುಖಮುಂಟಪಗಳನ್ನು ಹೊಂದಿದೆ.ಗರ್ಭಗೃಹದಲ್ಲಿ ಪಾಣಿಪೀಠದ ಮೇಲಿರುವ ೩೨ ಕೈಗಳ ಅಘೋರೇಶ್ವರ ಇಲ್ಲಿನ ಮುಖ್ಯ ಆಕರ್ಷಣೆ.ದೇಗುಲಗಳ ಮೇಲೆ ನಡೆದ ದಾಳಿಗಳಲ್ಲಿ ಅಘೋರೇಶ್ವರನನ್ನು ತುಂಡರಿಸಿದರೂ ಅವನ ಕಾಲಿನ ಭಾಗವನ್ನು ದೇಗುಲದ ಹೊರಗಡೆಯೂ ೩೨ ಕೋನಗಳ ಪಾಣಿಪೀಠವನ್ನು ಗರ್ಭಗೃಹದಲ್ಲೂ ಕಾಣಬಹುದು:-(

 ನಂತರ  ಅರ್ಧಮಂಟಪದಲ್ಲಿ ಬಿಳಿ ಕಲ್ಲಿನಿಂದ (ಅಮೃತ ಕಲ್ಲಿನಿಂದ) ಕೆತ್ತಿದ ಸಣ್ಣ ನಂದಿಯಿದೆ. ಅರ್ಧಮಂಟಪದ ದ್ವಾರದಲ್ಲಿ ಎರಡೂ ಬದಿಯಲ್ಲಿ ಅಘೋರೇಶ್ವರನ ಪರಿವಾರದ ಕೆತ್ತನೆಗಳಿವೆ. ಎಡಭಾಗದಲ್ಲಿ ಮಹಿಷಮರ್ಧಿನಿ, ಭೈರವನ ಕೆತ್ತನೆಗಳಿದ್ದರೆ ಬಲಭಾಗದಲ್ಲಿ ಗಣಪತಿ, ಷಣ್ಮುಖನ ಕೆತ್ತನೆಗಳಿವೆ. ಎದುರಿನ ಮುಖಮಂಟಪ ಕೆತ್ತನೆಯಿರುವ ಕಂಬಗಳ ಆಧಾರದ ಮೆಲೆ ನಿಂತಿದೆ. ದೇಗುಲವು ದ್ರಾವಿಡ ಶೈಲಿಯ ಕಳಸವನ್ನು ಹೊಂದಿದೆ.

ದೇವರಿಗೆ  ಕೈ ಮುಗಿದು ಹಾಗೇ ತಲೆಯೆತ್ತಿ ನೋಡಿದರೆ ಮೇಲ್ಚಾವಣಿಯಲ್ಲಿರುವ ಸುಂದರ ಕೆತ್ತನೆಗಳನ್ನು, ಕಂಬದಲ್ಲಿರುವ ಕೆತ್ತನೆಗಳನ್ನು ನೋಡಬಹುದು. ಅಘೋರೇಶ್ವರನ ಎದುರಿಗೆ ಕೆಳದಿಯನ್ನಾಳಿದ ಮೂರು ಅರಸರನ್ನು  ಕೆತ್ತಲಾಗಿದೆ. ಕೆಳಗೆ ಹೆಸರು ಬರೆದಿದ್ದರೂ ಇಕ್ಕೇರಿಗೆ ಹೋಗುವ ಮುನ್ನ ಈ ಮಾಹಿತಿ ಗೊತ್ತಿರದಿದ್ದರೆ ಅಥವಾ ಅಲ್ಲಿ ಯಾರಾದರೂ ಹೇಳದಿದ್ದರೆ, ನೀವು ಆ ರಾಜರನ್ನು ನೋಡಲು ಸಾಧ್ಯವೇ ಇಲ್ಲ !




 ಎಲ್ಲೆಡೆ ಎದುರಾಗೋ ಧ್ವಜ ಸ್ಥಂಬದ ಬದಲು ನಂದಿ ಮಂಟಪ, ಎಲ್ಲೆಡೆ ಇರೋ ನವರಂಗ ಇಲ್ಲಿ ಇಲ್ಲದೇ ಇರುವುದು ಇಲ್ಲಿನ ಮತ್ತೊಂದು ವಿಶೇಷತೆ ಅನಿಸುತ್ತದೆ.ನಾಗಮಂಡಲದ ಕೆತ್ತನೆಗಳು, ಚಂದ್ರನನ್ನು ನುಂಗುತ್ತಿರುವ ರಾಹು, ಇಪ್ಪತ್ತು ಕಿಟಕಿಗಳು, ಕುದುರೆ ಸವಾರ ಸೈನಿಕ, ಆನೆ, ಸಿಂಹ, ಮೊಸಳೆ, ಕುದುರೆಗಳ ಸಮ್ಮಿಶ್ರಣವಾದ ಪ್ರಾಣಿ, ಒಂದೇ ಚಿತ್ರದಲ್ಲಿರುವ ಆನೆ-ಮಂಗ-ನಾಯಿಗಳನ್ನೊಳಗೊಂಡ ಪ್ರಾಣಿ.. ಹೀಗೆ ತಲೆಯೆತ್ತಿ ನೋಡಿದತ್ತೆಲ್ಲಾ ಒಂದೊಂದು ವೈಶಿಷ್ಟ್ಯಗಳು ಕಾಣಸಿಗುತ್ತವೆ.





ಅಲ್ಲಿರೋ ಕೆತ್ತನೆಗಳನ್ನು ನೋಡಿ ದೇವಸ್ಥಾನದ ಎಡಭಾಗದಲ್ಲಿರೋ ಪ್ರವೇಶ ದ್ವಾರದಿಂದ ಹೊರಬಂದರೆ ಪಾರ್ವತಿ ದೇವಸ್ಥಾನ ಸಿಗುತ್ತದೆ.

 ಇಲ್ಲಿನ ಪಾರ್ವತಿ ದೇವಿಗೆ ಅಖಿಲಾಂಡೇಶ್ವರಿ ಎಂಬ ಹೆಸರು. ಸಣ್ಣಗಿರೋ ಆ ದೇಗುಲದ ಎದುರೂ ಕೆತ್ತನೆಗಳಿವೆ. ಅಲ್ಲೂ ಕೈ ಮುಗಿದು ಹಾಗೇ ಅಘೋರೇಶ್ವರನ ದೇಗುಲದ ಪ್ರದಕ್ಷಿಣೆ ಹಾಕಿದರೆ ಸುಮಾರಷ್ಟು ದೇವ ದೇವತೆಗಳು ಸಿಗುತ್ತಾರೆ. ಫೋಟೋ ಪ್ರಿಯರಿಗೆ ಸಾಕಷ್ಟು ಪೋಸುಗಳೂ ಗ್ಯಾರಂಟಿ. ಹಿಂದಿನ ಬಾರಿ ಹೋದಾಗ ದೇಗುಲದ ಹೊರಗಿನ ಕೆಲ ಪಾರ್ಶ್ವ ಕಾಲನ ಹೊಡೆತಕ್ಕೆ ಸಿಕ್ಕು ಪಾಚಿಗಟ್ಟಿ, ಕಪ್ಪಾಗಿ ಹೋಗಿದ್ದು ನೋಡಿ ಬೇಸರಿಸಿದ್ದೆ. ಈಗ ಮುಜರಾಯಿ ಇಲಾಖೆಯಿಂದ ದೇವಸ್ಥಾನವನ್ನು ಚಂದಗೊಳಿಸಲಾಗಿದೆ ಎಂಬ ಸುದ್ದಿ ಕೇಳಿದ್ದೇನೆ. ಹಾಗಾಗಿ ನೀವು ಬರುವ ವೇಳೆಗೆ ಇನ್ನೊಂದಿಷ್ಟು ಚಂದದ ದೃಶ್ಯಗಳು ನಿಮಗೂ ಸಿಕ್ಕಬಹುದು :-)


 



ಪ್ರಳಯದ ಭವಿಷ್ಯ :

ಇಲ್ಲಿನ ದೇವಸ್ಥಾನದಲ್ಲಿ ಒಂದು ಗೆರೆಯಿಂದ ಬೇರ್ಪಟ್ಟಿರುವ ಎರಡು ಹಲ್ಲಿಗಳನ್ನೂ, ಅವುಗಳ ಪಕ್ಕದಲ್ಲಿ ಒಂದು ಚೇಳನ್ನೂ ಕೆತ್ತಲಾಗಿದೆ. ಇದೇ ದೇಗುಲದಲ್ಲೊಂದು ಕಲ್ಲು ಕೋಳಿಯೂ ಇದೆ. ಆ ಕಲ್ಲು ಕೋಳಿ ಕೂಗಿ, ಆ ಚೇಳು ಒಂದು ಹಲ್ಲಿಯನ್ನು ಕಡಿದು ಆ ಹಲ್ಲಿಗಳು ಗೆರೆಯನ್ನು ದಾಟಿ ಮುಂದೆ ಬಂದು ಒಂದಕ್ಕೊಂದು ಮುಟ್ಟಿದಾಗ ಪ್ರಳಯವಾಗುತ್ತದೆ ಎಂಬ ಐತಿಹ್ಯವಿದೆ.ಆ ಪ್ರಳಯದ ಸಮಯದಲ್ಲಿ ಕಲ್ಲು ಬಸವ ಮೂರು ಸುತ್ತು ತಿರುಗುತ್ತಾನಂತೆ.

ಇದೇ ರೀತಿ ಮುಂಚೆ ಹೇಳಿದ ಚಿತ್ರದಲ್ಲಿನ ರಾಹು ಚಂದ್ರನನ್ನು ನುಂಗಿದಾಗ ಪ್ರಳಯವಾಗುತ್ತದೆ ಅಂತಲೂ ಹೇಳುತ್ತಾರೆ.

ದೇಗುಲದ ಹೊರಬಂದು ಮೆಟ್ಟಿಲುಗಳನ್ನು ಇಳಿಯುತ್ತಿದ್ದಂತೆಯೇ ಬಲಭಾಗದಲ್ಲಿ ಎತ್ತರದ್ದೇನೋ ಕಂಡಂತೆ ಆಗುತ್ತದೆ. ಹುಲ್ಲು ಬೆಳೆದಿರುವ ಇದನ್ನು ಸ್ವಲ್ಪ ಗಮನಿಸಿ ನೋಡಿದರೆ ಇದು ಸಭಾವೇದಿಕೆ ಆಗಿರಬಹುದಾದ ಅಥವಾ ಜಾತ್ರೆ ಸಮಯದಲ್ಲಿ ಉತ್ಸವಮೂರ್ತಿಯನ್ನು ಇಟ್ಟು ಪೂಜಿಸುವ ಸ್ಥಳದಂತೆ ಕಾಡುತ್ತದೆ. ಹಾಗೇ ಎಡಕ್ಕೆ ಬಂದರೆ ಒಂದು ಗಣಪತಿ ದೇವಸ್ಥಾನ. ಅಲ್ಲೂ ಕೈ ಮುಗಿದು ಮತ್ತೆ  ಮನೆಯತ್ತ ಮುಖ ಮಾಡಿದಾಗ ಇನ್ನೊಮ್ಮೆ ಇಕ್ಕೇರಿಗೆ ಬಂದು ಬಿಡೋಣವಾ ಅನ್ನೋ ಭಾವ.

ಮುಂದೆ..
ಇಕ್ಕೇರಿಯನ್ನು ದಾಟಿ ಹಾಗೇ ಮುಂದೆ ಹೋದರೆ ಹಳೆ ಇಕ್ಕೇರಿ ಕೋಟೆ ಸಿಗುತ್ತದೆ. ಅದು ಈಗ ಪೂರ್ತಿ ಹುಲ್ಲಲ್ಲಿ ಮುಚ್ಚಿ ಹೋಗಿದೆಯಂತೆ. ಹಾಗಾಗಿ ಅಲ್ಲಿಗೂ ಹೋಗಬೇಕೆಂಬ ಆಸೆ ಮುಂದೆ ಹಾಕುತ್ತಲೇ ಬಂದಿದ್ದೇನೆ. ಇನ್ನೊಮ್ಮೆ ಸಾಗರಕ್ಕೆ ತೀರಾ ಸಮೀಪದ ಹಳೆ ಇಕ್ಕೇರಿ ಮತ್ತು ಹೊಸನಗರ ಕೋಟೆಗಳಿಗೆ ಹೋಗಬೇಕೆಂಬ ಆಸೆಯಿದೆ.. ನೋಡಬೇಕು ಕಾಲ ಚಕ್ರ ಕಾಲಿಗೆ ಚಕ್ರ ಕಟ್ಟಿ ಯಾವಾಗ ಕರೆಸುತ್ತದೋ ಎಂದು :-)

ಹೋಗುವ ಬಗೆ:
ಸಾಗರದಿಂದ-ಇಕ್ಕೇರಿ- ೭ ಕಿ.ಮೀ
ಹೊಸನಗರ, ಸಿಗಂದೂರು ಹೋಗೋ ಬಸ್ಸಿನಲ್ಲಿ ಇಕ್ಕೇರಿ ಕ್ರಾಸಿನಲ್ಲಿ ಇಳಿದು ಸುಮಾರು ೨ ಕಿ.ಮೀ ನಡೆದರೆ ಇಕ್ಕೇರಿ. ಇಲ್ಲ ಸಾಗರದಿಂದಲೇ ಆಟೋದಲ್ಲಿ , ಸ್ವಂತ ವಾಹನದಲ್ಲಿ ಹೋಗಬಹುದು. ಇಕ್ಕೇರಿಯ ಮೇಲೆ ಹೋಗುವ ಬಸ್ಸುಗಳು ಅಪರೂಪ.
ಶಿವಮೊಗ್ಗದಿಂದ - ಸಾಗರ - ೭೩ ಕಿ.ಮೀ
ಬೆಂಗಳೂರಿನಿಂದ ಸಾಗರ- ೩೫೦ ಕಿ.ಮೀ

Sunday, June 16, 2013

ಅಪ್ಪಂದಿರ ದಿನ



ಅಪ್ಪಂದಿರ ದಿನದಂದು ಎಲ್ಲಾ ಅಪ್ಪಂದಿರಿಗೂ ಒಂದು ನಮನ.. .. ಅಪ್ಪ-ಅಮ್ಮ ಎಲ್ಲಾ ಆದ ಅಪ್ಪಂದಿರಿಗೂ, ಅಮ್ಮ-ಅಪ್ಪ ಎಲ್ಲಾ ಆದ ಅಮ್ಮಂದಿರಿಗೂ ಒಂದು ನಮನ..ಯಾಕೋ ಕಾಣೆ. ಅಪ್ಪ ಅಂದ್ರೆ ಅದೇನೋ ಪ್ರೀತಿ. ಕೇಳಿದಾಗ ಹಣ ಕೊಡ್ತಾರೆ ಅಂತಲಾ, ಬೈಯ್ಯೋ ಅಮ್ಮನಿಂದ ಬಚಾವ್ ಮಾಡ್ತಾರೆ ಅಂತಲಾ, ಔಷಧಿ ಕಹಿಯಾದ್ರೂ ಆರೋಗ್ಯಕ್ಕೆ ಸಿಹಿಯಾಗಿರೋ ತರ ಪ್ರತೀ ಬೈಯ್ಗುಳದ ಹಿಂದೆ ಇರುವ ಸದುದ್ದೇಶಗಳ ಕಾರಣದಿಂದ್ಲಾ ? .. ಗೊತ್ತಿಲ್ಲ.. ಯಾಕೋ ಇಷ್ಟ ಆಗ್ಬುಡ್ತಾರೆ. ಎಲ್ಲಾ ಇಷ್ಟಗಳಿಗೂ ಕಾರಣ ಇರಲೇಬೇಕೆಂದೇನಿಲ್ಲವಲ್ಲ..  


ಇವತ್ತು ಸಾಹಿತ್ಯ ರಸಧಾರಾದ ಆಶುಕವಿತೆಯಲ್ಲಿ ನನಗೆ ಬಂದ ವಿಷಯ ಅಪ್ಪನ ಪ್ರೀತಿ. ಆ ಕ್ಷಣಕ್ಕೆ ತೋಚಿದ ಸಾಲುಗಳಿಷ್ಟೇ.

ಹೇಗೆ ಹೇಳಲಿ ಅಪ್ಪ
ನಿನ್ನ ಪ್ರೀತಿಯ ರೀತಿ
ಬೆನ್ನ ಮೇಲೆನ್ನ ನೀ
ಹೊತ್ತು ತಿರುಗಿದ ವೀಥಿ

ಸ್ವತಃ ಮುಳುಗಿದ್ದರೂ
ಕಷ್ಟಸಾಗರದಲ್ಲಿ
ತೊಟ್ಟೂ ನೆನೆಯದಂತೆ ನನ್ನೆತ್ತಿದ ಪರಿ
ತೃಣ ಕಷ್ಟವನ್ನೂ ನೀಡದಾ ಪರಿ....

ಛೇ.. ಅಷ್ಟರಲ್ಲೇ ಮೂರು ನಿಮಿಷದ ಟೈಮಾಯ್ತು :-( ಬರ್ಯಕ್ಕಾಗಿದ್ದು ಇಷ್ಟೇನಾ ಅಪ್ಪನ ಬಗ್ಗೆ ಅಂತ ಅನಿಸಿ ಬಹಳ ಬೇಜಾರಾಯ್ತು.. ಕವನವಾಗಿರಲಿಲ್ಲವದು. ಪ್ರಯತ್ನ ಪ್ರಾಮಾಣಿಕವಾಗಿದ್ರೂ ಪರೀಕ್ಷೆಯಲ್ಲಿ ಫೇಲಾದ ಹುಡುಗನಂತೆ.. ಆ ಸ್ಪರ್ಧೆಯ ಮತ್ತೊಂದು ನಿಯಮಾವಳಿಯಂತೆ. ಮೂರು ನಿಮಿಷದಲ್ಲಿ ನಾವು ಬರೆದ ಕವನಗಳನ್ನ ವಾಚಿಸಬಹುದು.. ಆಗ ಹೊಳೆದದ್ದು ಅಪ್ಪನ ಬಗ್ಗೆಯೇ ಬರೆದ ಕವನ

ಅಕ್ಷರವಾಗಿಹ ಭಾವಗಳಲ್ಲಿ
ನೋವುಗಳೆಲ್ಲಾ ನಕ್ಕಿಹುದು
ತನ್ನನೆ ನುಂಗಿದ ನಿನ್ನೆಯ ನಡುವೆ
ನಾಳೆ ಆಸೆ ತಲೆ ಎತ್ತಿಹುದು |೧

ಬೊಗಸೆಗೆ ಸಿಗದ ನೆನಪಿನ ಬಿಂದು
ಸಾಗರವಾಗಿ ಉಕ್ಕಿಹುದು
ತನ್ನನೆ ತೇದ ತಂದೆಯ ನೆನಪು
ಕಂಗಳಂಗಳದಿ ಬಿಕ್ಕಿಹುದು |೨

ಮರೆತಿಹ ನಿನ್ನೆಯ ಮರೆಯದ ಕನಸು
ಚುಚ್ಚಿ ಕೊಲ್ಲುವುದು ಅನವರತ
ಕಾದಿಹೆ ನೀನು ಕಷ್ಟದ ವರ್ಷವ
ತಾಳ್ಮೆಯ ಶರಧಿಯ ಬತ್ತಿಸುತ |೩

ಕಾಲದ ಬಿಸಿಲಿಗೆ ಸುಟ್ಟಿಹ ಗಾಯ
ನಿನ್ನ ಅಗಲುವಿಕೆ ಮರೆಯುವುದೆ ?
ಮಾತ ಹಿಂದಿನ ಅವಿತಿಹ ಚಾಟಿ
ಏಟ ಕಾರಣವ ಅರಿತಿರದೆ
ಮರಳೋ ನೆನಪಲೇ, ಅದು ಯಾಕೋ ಯಾತನೆ
ವೇದನೆಯಲ್ಲದ ಭಾವನೆಯು
ಇದು ಮಾಮರ ಮರೆಯದ ಮಾಮಿಡಿಯು
ಮರೆಯಲಾರದಿದ ಮರೆಸುವ ಮುನ್ನ
ಮೆರೆಯೋ ಸಾಧನೆ ಯಾಚನೆಯು

ಅಪ್ಪನ ನೆನೆದಾಗ ಇದೂ ಯಾಕೋ ಒಂದು ತೂಕ ಕಮ್ಮಿಯೇ ಅನಿಸಿತು. ಏನೋ ಮಿಸ್ಸಿಂಗು ಅನಿಸೋ ಭಾವ.. ಅದೇನೆಂದು ತಿಳಿಯುತ್ತಿಲ್ಲ. ಅಪ್ಪಂದಿರ ದಿನದಂದು ಏನು ಬರೀಲಿ?
ಎರಡೂ ಕೈಗಳಲ್ಲಿ ಬರೆಯಬಲ್ಲ, ಒಟ್ಟೊಟ್ಟಿಗೇ ಅನೇಕ ಕೆಲಸ ಮಾಡಬಲ್ಲ ಪ್ರಾವೀಣ್ಯತೆಯ ಬಗ್ಗೆ ಬರೆಯಲೇ.. ಯಾವುದೂ ಅಸಾಧ್ಯವಲ್ಲವೆಂದು ಮುನ್ನುಗ್ಗುತ್ತಿದ್ದ ಬೆರಗ ಪರಿಯ ಬಗ್ಗೆ ಬರಿಯಲೇ ? ಅಪ್ಪ ಬಯ್ತಾ ಅಂತಿದ್ದ ಮಗ ಬೇರೆ ಊರಿಗೆ ಹೋದಾಗ "hai sunny" ಅಂತೊಂದು ಪತ್ರ ಬರೆದು ಕಣ್ಣೀರಿಡಿಸಿದ, ತಿಳಿದೋ ತಿಳಿಯದೆಯೋ ಕಣ್ಣು ತೆರೆಸಿದ ಬಗ್ಗೆ ಬರೆಯಲಾ ? ಗಣಿತ , ಇಂಗ್ಲೀಷುಗಳೆಂದರೆ ಕಬ್ಬಿಣದ ಕಡಲೆಯೆಂದಂಜುತ್ತಿದ್ದ ಮಗನಿಗೆ ಧೈರ್ಯ ತುಂಬಿ ವಿದೇಶೀಯರೊಂದಿಗೂ ನಿರರ್ಗಳವಾಗಿ ಮಾತುನಾಡುವಂತೆ ಮಾಡಿದ ಮ್ಯಾಜಿಕ್ ಬಗ್ಗೆ ಬರೆಯಲಾ ? ಯಾವುದರ ಬಗ್ಗೆ ಬರಿಯಲೆಂದೇ ಅರಿಯುತ್ತಿಲ್ಲ :-( ತನ್ನ ಜೀವನ ಅಂದ್ರೆ ಮಗನೇ ಎನ್ನೋ ತಾಯಿಯ ಪಾತ್ರದ ಬಗ್ಗೆ ಮಾತುನಾಡುವಂತೆಯೇ ಇಲ್ಲ. ತಾನೇ ಅಪ್ಪ-ಅಮ್ಮ ಎರಡೂ ಆಗಿ ಬೆಳೆಸಿದ ಪರಿಯ ಮರೆತರೆ ನನಗಿಂತ ಪಾಪಿ ಯಾರೂ ಇಲ್ಲ. ಅದನ್ನು ಒತ್ತಟ್ಟಿಗಿಡೋಣ. ಆದರೂ ಅಪ್ಪನ ನೆನಪು ಸದಾ ಕಾಡುತ್ತದೆ ಯಾಕೋ.. ಎಲ್ಲಾ ಕಾಡುವಿಕೆಗಳಿಗೂ ಕಾರಣಗಳಿರಬೇಕೆಂದಿಲ್ಲವಲ್ಲಾ ?


ದೇಶಸೇವೆಯ ನೌಕರಿಯಿಂದ ರಿಟೈರ್ಮೆಂಟು ತಗೊಂಡ್ರೂ ಅಪ್ಪನಿಗೆ ಮೈಗಂಟಿದ ಆದರ್ಶಗಳು ಬಿಡಲೊಲ್ಲವು. ಪೇಟೆಯಿಂದ ದೂರಿನ ಕಾಡಲ್ಲೊಂದು ಮನೆಯ ಮಾಡಿ ಪ್ರಶಾಂತವಾಗಿರಬೇಕೆಂದು ಕನಸಮನೆ ಕಟ್ಟಿದವನಿಗೆ ಕಷ್ಟಗಳ್ಯಾಕೋ ಜನರಿಗಿಂತ ಹೆಚ್ಚಿನ ದೋಸ್ತಿಯಾದವು. ಊರವರೇ ಗೌರವ ಕೊಡೋ ಹೆಗ್ಡೇರೆಂಬ ಬಿರುದು ವಿಧಿಗೂ ಹೊಟ್ಟೆಯುರಿ ತರಿಸಿತೇ ? ಗೊತ್ತಿಲ್ಲ. ಆಗಾಧ ಬುದ್ದಿ, ಕನಸುಗಳನ್ನು ಮಗನಾಗಿ ನೋಡೋ ಭಾಗ್ಯವ , ತನ್ನ ಸಾಮರ್ಥ್ಯಗಳಲ್ಲಿ ಹತ್ತರಷ್ಟಾದ್ರೂ ಮಗನಿಗೆ ಧಾರೆಯೆರೆವ ಯೋಗ ಕಳೆದದ್ದೇಕೆ ? ಗೊತ್ತಿಲ್ಲ. ಮುಡಿಯಲ್ಲಿ ಕೆಂಡ ಹೊತ್ತು ಅದು ತನ್ನನ್ನೇ ಸುಡುತ್ತಿದ್ರೂ ತೋರಗೊಡದೇ ದುಡಿಯೋದೇ ಚೆನ್ನಾಗಿರೋಕೆ ಮಗ. ನೀ ಚೆನ್ನಾಗಿರು ಅಂತ ಮಗ, ಮಡದಿಗೆ ಏನೂ ಕಮ್ಮಿ ಮಾಡದ ಪರಿಗೆ ಏನನ್ನುವುದು ? ಗೊತ್ತಿಲ್ಲ. ನಂಬಿದಾ ಆದರ್ಶಗಳೇ ಜೀವ ಹಿಂಡಿದವೇ ? ಪ್ರಾಣ ಸ್ನೇಹಿತರೆಂಬುವವರ ದ್ರೋಹಗಳು ಉಸಿರುಗಟ್ಟಿಸಿದವೇ ? ಕನಸ ಮನೆಯೊಂದುಳಿಸಿ ಇಡೀ ಪ್ಲಾಟ ಅಗ್ನಿ, ಜಿಂಕೆಗಳಾಗಿ ನಾಲ್ಕು ಬಾರಿ ಸುಟ್ಟ ಪ್ರಕೃತಿಯ ಅಟ್ಟಹಾಸಕ್ಕೆ ಮನ ನೊಂದಿತೇ ?  ಗೊತ್ತಿಲ್ಲ. ದುಃಖವಿಲ್ಲದ ಜೀವವಿಲ್ಲ ಎನ್ನುತ್ತಾರೆ.ಆದರೆ ಕೈ ಹಾಕಿದ್ದೆಲ್ಲಾ ಸೋಲಾಗಿ, ಸಾಲದ ಪರ್ವತವಾಗಿಸೋ ದುಃಖವೇ ಜೀವವಾದರೆ ?

<script async src="https://pagead2.googlesyndication.com/pagead/js/adsbygoogle.js"></script>
<ins class="adsbygoogle"
     style="display:block"
     data-ad-format="fluid"
     data-ad-layout-key="-gq-2e-1k-1g+qa"
     data-ad-client="ca-pub-5071889101438500"
     data-ad-slot="7647446493"></ins>
<script>
     (adsbygoogle = window.adsbygoogle || []).push({});
</script>

ಎಲ್ಲಾ ಹುಡುಗರಿಗೂ ಅವರಪ್ಪನೇ ಸೂಪರ್ ಹೀರೋ. ಅವರು ಮಾಡಿದ್ದೆಲ್ಲಾ ಚೆನ್ನಾಗೇ ಕಾಣುತ್ತೆ..ಆ ಪೂರ್ವಾಗ್ರಹದಿಂದ ಹೊರಬಂದು ನೋಡಿದರೂ ಅಪ್ಪ ಇಷ್ಟವಾಗುತ್ತಾನೆ. ಅಂದು ಶಿಕ್ಷಿಸುವ ಶಿಕ್ಷಕನಾಗಿದ್ದವ ಇಂದು ಗೆಳೆಯನಾಗುತ್ತಿದ್ದನೋ ಎನಿಸುವಂತೆ ಮಾಡುತ್ತಾನೆ. ಏನಿದು , ಅಪ್ಪನನ್ನು ಏಕವಚನದಲ್ಲಿ ಸಂಬೋಧಿಸುವಷ್ಟು ಸಿಟ್ಟೇ ಎಂದು ಯೋಚಿಸಬೇಡಿ. ನಮ್ಮ ಕಡೆ ದೇವರನ್ನೇ ಏಕವಚನದಲ್ಲಿ ಕರೆಯುತ್ತೇವೆ. ಹಾಗಾಗಿ ರಕ್ತಸಂಬಂಧ ಇರೋರನ್ನ, ಅತೀ ಪ್ರೀತಿಪಾತ್ರರನ್ನು ಏಕವಚನದಲ್ಲೇ ಕರೀಬೇಕು ಎಂದು ರೂಡಿಯಿದೆ. ಅಪ್ಪನಿಗಿಂತಾ ಅಚ್ಚುಮೆಚ್ಚು ಬೇಕೇ  ? ಅಂದ ಹಾಗೆ,ಈಗಲೂ ಊರಿಗೆ ಹೋದರೆ ಹೆಗ್ಡೇರ ಮಗ ಅಂತಾರೆ ಹೊರತು ಮಗನ ಹೆಸ್ರು ಆ ಊರವ್ರಿಗೆ ಗೊತ್ತಿಲ್ಲ :-) ಅಪ್ಪನಿಂದ ಇಂಗ್ಲೀಷ್ ಪಾಠ ಕೇಳಿದ ಎಷ್ಟೋ ಜನರು ಎಲ್ಲೆಲ್ಲೋ ಮರೆಯಾಗಿದ್ದಾರೆ. ಆದರೆ ಊರಿನ ಪೇಟೆಯಲ್ಲಿ ಸಿಕ್ಕಾಗ ಈಗಲೂ ಆತ್ಮೀಯರಾಗಿ ಮಾತಾಡಿಸುತ್ತಾರೆ. ಹಳೆಯ ದಿನಗಳ ನೆನೆಯುತ್ತಾರೆ. "ಪರಿವರ್ತಿನೀ ಸಂಸಾರೆ, ಮೃತಃ ಕೋವಾ ನ ಜಾಯತೇ. ಸ ಜಾತೋ ಯೇನ ಜಾತೇನ ಯಾತಿ ದೇಶಃ ಸಮುನ್ನತಿಂ" ಎಂಬ ಸುಭಾಷಿತವಿದೆ. ಬದಲಾಗುತ್ತಿರುವ ಈ ಸಂಸಾರದಲ್ಲಿ ಯಾರೂ ಸಾಯೋದಿಲ್ಲ. ಯಾರ ಜನ್ಮದಿಂದ ದೇಶೋದ್ದಾರವಾಗುತ್ತೋ ಆತನ ಜನ್ಮ ಸಾರ್ಥಕ ಎಂಬುದದರ ಅರ್ಥ. ಯಾವುದೇ ಸ್ಪರ್ಧೆಯಾದರೂ ಭಾಗವಹಿಸುವಂತೆ ಪ್ರೋತ್ಸಾಹಿಸುತ್ತಿದ್ದ ಅಪ್ಪ, ಸೋಲುಗಳಿಗೆಂದಿಗೂ ಎದೆಗುಂದದಂತೆ ಬೆನ್ನ ಹಿಂದಿರುತ್ತಿದ್ದ ಅಪ್ಪ, ಎಕ್ಸಾಮು ಎಕ್ಸಾಮೆಂದು ಯಾಕೆ ತಲೆ ಕೆಡ್ಸಿಕೋತೀಯೋ. ನೀ ಹೇಗಾದರೂ ಇರೋ. ಆರಾಮಾಗಿರು. ಇದೇ ಊರಲ್ಲಿ ಯಾವುದಾದ್ರೂ ಒಂದು ಕೆಲಸ ಸಿಕ್ಕೇ ಸಿಗುತ್ತೆ ಅನ್ನೋ ಅಪರಿಮಿತ ಜೀವನೋತ್ಸಾಹದ ಅಪ್ಪ.. ಅಂದ ಮಾತ್ರಕ್ಕೆ ಓದನ್ನು ಎಂದೂ ನಿರಾಕರಿಸದ ಅಪ್ಪ..  ಅಕ್ಷರ ಸರಿಯಿಲ್ಲವೆಂದು ಬಯ್ಯಿಸಿಕೊಳ್ಳುತ್ತಿದ್ದ ನಿನ್ನ ಮಗನೀಗ ಬೆಳೆದು ನಿನ್ನ ಬಗ್ಗೆಯೇ ಸಾಲುಗಳ ಪೋಣಿಸುವ ಪ್ರಯತ್ನದಲ್ಲಿದ್ದಾನೆ..  ಹೇಳೋ ಅನಂತ ಸಾಧ್ಯತೆಗಳ ಮಧ್ಯೆ ಯಾವದನ್ನಾರಿಸುವುದೆಂಬ ಗೊಂದಲದಲ್ಲಿ ಮುಳುಗಿಹೋಗಿದ್ದಾನೆ.

Saturday, June 15, 2013

ಬೆಂಗಳೂರಿನ ದಾಖಲೆ ಮಳೆ


ಟ್ರಾಫಿಕ್ ಜಾಂಗೂ ಬೆಂಗ್ಳೂರಿಗೂ ಖಾಸಾ ಖಾಸಾ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯನೇ..ಆದರೆ ಬೆಂಗ್ಳೂರಲ್ಲಿ ದಾಖಲೆ ಮಳೆಯೆಂಬ ದಾಖಲೆಯಲ್ಲಿ ದಾಖಲಾಗಿದ್ದು, ಮುಕ್ಕಾಲು ಘಂಟೆಯ ಪಯಣ ಮಳೆರಾಯನಿಂದ ಮೂರು ಘಂಟೆಯಷ್ಟಾಗಿದ್ದು  ಮಾತ್ರ ಮರೆಯಲಾರದ ನೆನಪುಗಳು..
 
ಮೊನ್ನೆ ಎಂದಿನಂತೆ ಶುಭ ಶುಕ್ರವಾರ. ಅಕ್ಷರಶ: ಸೆಕೆಯಲ್ಲಿ ಬೇಯ್ತಿರೋ ಬೆಂಗಳೂರಿಂದ ದೂರ ನನ್ನ ಹುಟ್ಟೂರೆಡೆಗೆ ತೆರಳೋ ಖುಷಿಯಿಂದ ಸಹಜವಾಗೇ ಶುಕ್ರವಾರ ಶುಭದ್ದೆನಿಸಿತ್ತು. ಆದರೆ ಸಂಜೆ ಆರು ಘಂಟೆಯಾಗುತ್ತಿದ್ದಂತೆಯೇ ಎಲ್ಲಿಂದಲೋ ಕವಿದ ಮೋಡಗಳು ಅದ್ಯಾವ ಮಾಯೆಯಲ್ಲಿ ಮಳೆ ಸುರಿಸತೊಡಗಿದವೋ ತಿಳಿಯಲೇ ಇಲ್ಲ…ಯಾರೋ  ಬಾಗಿಲು ತೆಗೆಯುತ್ತಿದ್ದ ಹಾಗೆಯೇ ಉಧೋ ಎಂದು ಮಳೆಯ ಸದ್ದು. ಇದು ಯಾವಾಗಲೂ ಸುರಿದಂತೆ ಮಾಡಿ ಫೂಲ್ ಮಾಡೋ ಬೆಂಗಳೂರ ಸಾಧಾರಣ ಮಳೆ ಬಿಡೆಂದು ಸುಮ್ಮನಾದೆ. ಅರ್ಧಘಂಟೆ ಆಯ್ತು. ಮುಕ್ಕಾಲಾಯ್ತು. ಘಂಟೆ ಎಂಟಾದ್ರೂ ಮಳೆ ನಿಲ್ಲೋ ಸುಳಿವೇ ಇಲ್ಲ. ಊರಿಗೆ ಹೋಗ್ಬೇಕು ಅಂತ ಪ್ಲಾನ್ ಮಾಡಾಗಿದೆ ಆದ್ರೆ ಆಫೀಸಿಂದ ಮನೆಗೇ ಮರಳಕ್ಕಾಗ್ತಿಲ್ವಲ್ಲ ಅಂತೊಮ್ಮೆ ಯೋಚನೆ ಬಂತು. ನೆನೆದ್ರೆ ನೆನೆದ್ರಾಯ್ತು ಅಂತ ಬಂದ ಬಸ್ಸೊಂದಕ್ಕೆ ನೆನೆನೆನೆದೇ ಓಡಿ ಹತ್ತಿದ್ದೂ ಆಯ್ತು..ಬಸ್ಸೊಳ್ಳಗಿದ್ದವ್ರೆಲ್ಲಾ ಮಳೆಯಲ್ಲಿ ನೆಂದಿದ್ದವರೇ. ಒದ್ದೆ ಕೂದಲುಗಳು, ನೀರು ತೊಟ್ಟಿಕ್ತಿದ್ದ ಬಟ್ಟೆಗಳ್ನ ನೋಡಿ ನಾನೇ ಪರ್ವಾಗಿಲ್ಲ ಗುರೂ ಅಂದ್ಕೊಂಡೆ.
 
ನಂ ಸ್ಟಾಪು ಬಂತು. ಆದ್ರೆ ಮನೆ ಪಕ್ಕನೇ ಇಲ್ವೇ.. ಓಡಿದ್ರೂ ಐದು ನಿಮಿಷ. ಆದ್ರೆ ಮಳೆ ? ಬೆಂಗ್ಳೂರಿಗೆ ಬಂದು ನೀನು ಪಕ್ಕಾ ಫಾರಿನರ್ರೇ ಆಗಿದೀಯ.. ಮಲೆನಾಡಲ್ಲೇ, ಮಳೆಕಾಡಲ್ಲೇ ಹುಟ್ಟಿ ಬೆಳೆದವ ಈ ಮಳೆಗೆ ಹೆದರ್ತಾ ಇದೀಯಲ್ಲ ಅಂದಂತನಿಸಿ ನಗು ಬಂತು..ಅಲ್ಲಿಂದ ಒಂದೇ ಓಟಕ್ಕೆ ಪೀಜಿ ಮುಟ್ಟಿದೆ.. ತಕ್ಷಣ ತಲೆ ಒರೆಸ್ಕೊಂಡಿದ್ದು ಬಿಟ್ರೆ ಬೇರೇನು ಮಾಡಕ್ಕೂ ಟೈಮಿರಲಿಲ್ಲ. ಘಂಟೆ ಒಂಭತ್ತಾಗ್ತಾ ಬಂತು. ಊರಿಗೆ ಬೇರೆ ಹೋಗ್ಬೇಕಲ್ಲಾ.. :-) ಬಿಸಿ ಬಿಸಿ ಊಟ ಹೊಟ್ಟೆ ಒಳಗೆ ಇಳೀತಿದ್ದಾಗೆ ಸೋಂಬೇರಿತನ ಆವರಿಸೋಕೆ ಶುರು ಆಯ್ತು. ಇಲ್ಲೇ ಆರಾಮಾಗಿ ಮಲ್ಗಿ ಬಿಡೋಣ ಅನ್ಸೋಕೂ ಶುರು ಆಯ್ತು.. ಹಂಗೇ ಮಲ್ಗಿದ್ದಿರೆ ಬೆಂಗ್ಳೂರ ದಾಖಲೆ ಮಳೆ ಅನ್ನೋದನ್ನ ಸ್ವತಃ ಅನುಭವಿಸೋ ಸುಖ(?) ಇರ್ತಿರ್ಲಿಲ್ಲ(!!) ಅದು ಬಿಡಿ, ಫುಲ್ ರೆಸ್ಟೆಂಬ ವೀಕೆಂಡುಗಳಲ್ಲಿ ಈ ವಿಷಯ ಗೊತ್ತೇ ಆಗ್ತಿರ್ಲಿಲ್ಲ. 
 
ಶುಕ್ರವಾರ ರಾತ್ರೆ ಎರಡು ಘಂಟೆಗಳ ಅವಧಿಯಲ್ಲಿ ಬೆಂಗಳೂರಲ್ಲಿ ಸುರಿದ ಮಳೆ ೧೦ ಸೆಂಟಿಮೀಟರ್(೧೦೦ ಮಿ.ಮೀ). ಇದು ೧೨೨ ವರ್ಷಗಳಲ್ಲೇ ಭಾರೀ ಮಳೆಯಂತೆ. ಇದೇ ೧೨೨ ವರ್ಷಗಳ ಹಿಂದೇ ಜೂನ್ ೧೪ರಲ್ಲಿ ಸುರಿದ ೧೦೧ ಮಿ.ಮೀ ಮಳೆ ಇದುವರೆಗಿನ ಒಮ್ಮೆಗೆ ಬಿದ್ದ ಮಳೆಯ ದಾಖಲೆಯಂತೆ. ರಾತ್ರಿ ಪೂರ್ತಿ ಸುರಿಯುತ್ತಿದ್ದ ಮಳೆಗೆ ಮೊದಲೇ ಕಟ್ಟಿದ ಮೋರಿಗಳಲ್ಲಿ ನೀರು ಸಾಗದೇ ರಸ್ತೆಗಳೇ ಮೋರಿಗಳಾದವು. ಕೆಟ್ಟ ಡ್ರೈನೇಜ್ ಪ್ರಭಾವವೇ ಸುರಿದ ಹುಚ್ಚು ಮಳೆಯ ಪ್ರಭಾವವೋ ಕಣ್ಣು ಹಾಯಿಸಿದತ್ತೆಲ್ಲಾ ನೀರೇ ನೀರು. ರಸ್ತೆಯೋ, ಕೆರೆಯೋ ಗೊತ್ತಾಗ್ತಿರ್ಲಿಲ್ಲ. ಕೆರೆ ಮುಚ್ಚಿ ಅಪಾರ್ಟಮೆಂಟ್ ಕಟ್ಟಿದಾಕ್ಷಣ ಕೆರೆಯತ್ತ ಹರಿಯುತ್ತಿದ್ದ ನೀರಿನ ಸಹಜ ಗತಿ ಬದಲಾಗತ್ತಾ ? ಇನ್ನೂ ಅಲ್ಲಿ ಕೆರೆನೇ ಇದೆ ಅಂದ್ಕೊಂಡು ನುಗ್ಗಿದ್ದ ಅಮಾಯಕ ಮಳೆ(?) ನೀರಿಂದ ಅಪಾರ್ಟುಮೆಂಟುಗಳೊಳಗೆಲ್ಲಾ ನೀರು ನುಗ್ಗಿ ಒಬ್ಬರ ಬಲಿಯೂ ಆಯಿತು :-(  
 
ಯಾವತ್ತೂ ಯಮವೇಗದಿಂತ ಚಲಿಸುತ್ತಿದ್ದ ವಾಹನಗಳಿಗೆ ನಿನ್ನೆ ಮೊಳಕಾಲುದ್ದ ನೀರಲ್ಲಿ ಮುಂದೆ ಹೋದಲಾದರೆ ತಾನೇ. ಆಮೆಗತಿಯಿಂದ ಸಾಗ್ತಿದ್ದ, ಕೆಲ ಕಡೆ ಎತ್ತ ಸಾಗ್ಬೇಕು ಅಂತನೇ ತಿಳಿದೇ ನಿಲ್ತಿದ್ದ ವೆಹಿಕಲ್ಗಳು.. ಪರಿಣಾಮವೇ ಟ್ರಾಫಿಕ್ ಜಾಂ :-( ಬೆಂಗಳೂರಿಗೆ ಬಂದ ಮೇಲೆ ಇದು ಹೊಸತೇನು ಅಲ್ಲ ಅಂತನಿಸಿದರೂ ಅದರ ಅಪರಾವಸ್ಥೆ ನೋಡಿದ್ದು ನೆನ್ನೆಯೇ. ಮಾರತ್ತಳ್ಳಿಯಿಂದ ಮೆಜೆಸ್ಟಿಕ್ಕಿಗೆ 35 ರಿಂದ ೪೦ ನಿಮಿಷ. ರಾತ್ರೆ ಎಂಟೂಕಾಲಿಗೆ ಹೊರಟ ಗೆಳೆಯರೊಬ್ಬರು ನಿನ್ನೆ ಮೆಜೆಸ್ಟಿಕ್ ತಲುಪೋ ಹೊತ್ತಿಗೆ ಹನ್ನೊಂದೂ ಕಾಲು. ಆಮೇಲೆ ಮಳೆಯ ಆರ್ಭಟ ನಿಲ್ಲದಿದ್ದರೂ ಶುರುವಿನಷ್ಟಿಲ್ಲದಿದ್ದರಿಂದ ನಾನು ಸ್ವಲ್ಪ ಬೇಗ ತಲುಪಿದೆ. ಬೇಗ ಅಂದ್ರೆ ಭಾರೀ ಬೇಗ ಅಲ್ಲ ಸ್ವಾಮಿ. ಒಂಭತ್ತೂವರೆಗೆ ಹೊರಟವನು ಮೆಜೆಸ್ಟಿಕ್ ತಲುಪುವಷ್ಟು ಹೊತ್ತಿಗೆ ಹನ್ನೊಂದು ನಲ್ವತ್ತು! ಏನ್ಮಾಡೋಣ. ಇಳಿದು ನಡೆದಾದ್ರೂ ಹೋಗೋಣ ಅಂದ್ರೆ ಮೊಳಕಾಲುದ್ದದ ಮೋರಿ ನೀರು :-( . ಬೆಂಗ್ಳೂರು ಏರಿಯಾಗಳು ರಾತ್ರೆ ವೇಳೆ ಸೇಫಲ್ಲ ಗುರು, ಮಳೇಲಿ ರಸ್ತೆ ಯಾವ್ದು, ಮೋರಿ ಯಾವ್ದು ಅಂತ್ಲೂ ಗೊತ್ತಾಗಲ್ಲ. ನಡೀತೀನಿ ಅಂತ ಹೋಗಿ ಯಾವ್ದಾದ್ರೂ ಓಪನ್ ಮ್ಯಾನ್ ಹೋಲಿಗೆ ಕಾಲಾಕಿದ್ರೆ ಏನ್ಮಾಡ್ತೀರಾ ಅಂದ್ರು ಬಸ್ಸಲ್ಲಿರೋ ಬೆಂಗಳೂರಿನವರೊಬ್ರು . ಅವತ್ತು ರಾತ್ರೆ ಬಿ ಎಮ್ಟೀಸಿ ಬಸ್ಸೊಂದು ಮ್ಯಾನ್ ಹೋಲಿಗೆ ಸಿಕ್ಕಾಕೋಂಡಿತ್ತು ಅಂತ ಮಾರ್ನೇ ದಿನ ಪೇಪರಲ್ಲಿ ಓದಿದೆ! ಯಪ್ಪಾ ಅವ್ರ ಮಾತನ್ನು ಕೇಳ್ದೇ ನಾನೇನಾದ್ರೂ ಹೊರಟಿದ್ರೆ ? !!!ಉಪ್, ದೇವ್ರೆ ಕಾಪಾಡ್ದ ಅಂತ ಅಂದ್ಕೊಳ್ತಾ ಇದೀನಿ..
 
ಆಟೋ, ಕಾರುಗಳ ಒಳಗೆ ನೀರು ನುಗ್ತಿದ್ದ ಸಮಯದಲ್ಲಿ ಕೆಲವರಿಗೆ ರವೀಂದ್ರ ಸಿಂಗ್ ಅವರ i too had love story ಯ ಮಳೆಯ ಸನ್ನಿವೇಶ ನೆನಪಾಗಿರ್ಬೋದು. ತೀರಾ ಅಲ್ಲಿಗೆ ಹೊದೋದೇಕೆ. ನಮ್ಮ ಮಲೆನಾಡಿಗೇ ಹೋದ್ರೂ ಮಳೆ ಸಾಮಾನ್ಯ. ಒಂದು ಕಂಬಳಿ ಕೊಪ್ಪೆಯೋ, ಪ್ಲಾಸ್ಟಿಕ್ ಕೊಪ್ಪೆಯೋ ಹೊದ್ದುಕೊಂಡು ಅದೇ ಮಳೆಯಲ್ಲಿ ಅಲೆದಾಡೋ, ದುಡಿಯೋ ಜೀವಗಳಿಗೆ ಒಂದು ದಿನವೇಕೆ ಒಂದು ತಿಂಗಳು ಮಳೆ ಸುರಿದರೂ ಏನೂ ಅನ್ನಿಸೊಲ್ಲ. ಮಳೆ,ಉಂಬುಳ, ಮಳೆಗಾಲದಲ್ಲಿ ಅಲ್ಲಿ ಹಾಕೋ ಹೊಡಸಲು ಎಂಬ ಬೆಂಕಿಯ ಒಲೆಗಳೆಲ್ಲಾ ಅವರಿಗೆ ತೀರಾ ಕಾಮನ್ನು. ಅಲ್ಲಿ ಎಷ್ಟು ಸೆಂಟಿಮೀಟರಾಯ್ತೆಂದು ಅಳೆಯುವವರು ಯಾರೂ ಇಲ್ಲ. ಅವರಿಗೆ ಸೆಂಟಿಮೀಟರೆಂಬುದು ಮಕ್ಕಳ ಸ್ಕೇಲಲ್ಲಿ ಮಾತ್ರ. ಮಳೆಯನ್ನೂ ಯಾರಾದ್ರೂ ಅಳಿತಾರಾ ಅಂತ ಆಶ್ಚರ್ಯ ಪಡೋ, ಬೆಂಗ್ಳೂರಲ್ಲಿ ಭಾರೀ ಮಳೆಯೆಂಬ ಕಾರುಗಳೆಲ್ಲಾ ತೇಲ್ತಿರೋದನ್ನ ನೋಡಿ ಆ ಮಳೆ ಇಲ್ಲಾದ್ರೂ ಬರ್ಬಾರ್ದಿತ್ತಾ , ಅರ್ಧ ಅಷ್ಟೇ ತುಂಬಿರೋ ಎಣ್ಣೆ ಹೊಳೆ ತುಂಬ ಬಾರ್ದಿತ್ತಾ ಅನ್ನೋ ಜೀವಗಳವು. ಎಣ್ಣೆ ಹೊಳೆ ಸೇತುವೆ ಮೇಲೆಲ್ಲಾ ನೀರು ಹರಿದು ಬಸ್ಸು ಹೋಗದೆ ಶಾಲೆಗೆ ರಜಾ ಸಿಕ್ಕೀತೇನೋ ಎಂದು ಬೇಡೋ ಎಳೆ ಜೀವಗಳು :-) ಮಳೆ ಬಂದ್ರೆ ತಿಂಗಳುಗಟ್ಟಲೇ ಕರೆಂಟಿಲ್ಲ, ಹಾಳು ಮಳೆ ಎಂಬ ಶಾಪ ಹಾಕೋ ಹೆಂಗಳೆಯರು.. ಈ ಪಾಟೀ ಮಳೆ ಬಂದ್ರೆ ನಮ್ಮನೆ ತ್ವಾಟದಲ್ಲಿ ಒಂದು ಮರನಾದ್ರೂ ಉಳಿಗ ? ಕೊಳೆ ಬಂದು ಹಾಳ್ಬಿದ್ದು ಹೋಗ್ತು. ದರಿದ್ರ ಮಳೆ ಅನ್ನೋ ಕವಳದ ರಾಂಭಟ್ರು… ಇಂತದ್ದೇ ದೃಶ್ಯಗಳು ಘೋರ ಮಳೆ ಅಂದಾಗ ನೆನಪಾಗ್ತಿತ್ತೇ ಹೊರ್ತು ಬಸ್ಸೊಂದರಲ್ಲಿ ಎರಡೂವರೆ ಘಂಟೆ ಕಾಯಬೇಕಾದ ಸನ್ನಿವೇಶ ಕನಸಲ್ಲೂ ಬರ್ತಿರ್ಲಿಲ್ಲ. ಅಂತದ್ದೊಂದಕ್ಕೆ ಸಾಕ್ಷಿಯಾದದ್ದು ನಿನ್ನೆ :-(
 
ಅಂತೂ ಮೆಜೆಸ್ಟಿಕ್ ಬಂದು ಮುಟ್ಟಿದರೂ ಬಸ್ಸುಗಳು ಹೊರಡ್ತಿರ್ಲಿಲ್ಲ. ಸಾಕ್ಷಾತ್ ಕೆರೆಯಾಗಿತ್ತು ಮೆಜೆಸ್ಟಿಕ್.. ಹತ್ತು ಹತ್ತೂವರೆಗೆ ಹೊರಡಬೇಕಾದ ಬಸ್ಸುಗಳು ಜನರಿಗೆ ಕಾಯುತ್ತಾ ಹನ್ನೆರಡಾದರೂ ಹೊರಟಿರಲಿಲ್ಲ. ಡಿಪೋದಲ್ಲಿ ಗಾಡಿಯೊಳಗೆಲ್ಲಾ ನೀರು ನುಗ್ಗಿ ನೀರಿಳೀಲಿ ಅಂತ ಕಾಯ್ತಾ ಕೂತಿದ್ರಂತೆ.. ಇನ್ನು ಕೆಲೋ ಗಾಡಿಗಳು ನಮ್ಮಂತೆ ಮಧ್ಯ ಮಧ್ಯ ಸಿಕ್ಕಾಕೊಂಡು ಮೆಜೆಸ್ಟಿಕ್ಕಿಗೆ ಬರೋದೇ ಸಾಹಸವಾಯ್ತಂತೆ :-( ಕೊನೆಗೂ ಬಸ್ಸೇನೋ ಹೊರಡ್ತು. ಆದ್ರೆ ಹೆಜ್ಜೆ ಹೆಜ್ಜೆಗೂ ಜಂಪುಗಳು. ಬೆಂಗ್ಳೂರಲ್ಲಿರೋ ರಸ್ತೆಗಳಿಗೆಲ್ಲಾ ಇವತ್ತೇ ತೂತು ಬಿದ್ದಿದ್ಯಾ ಅಂತನಿಸ್ತು.. ಪಾಪದ ಡ್ರೈವರ್ರು.. ನೆಲಕಾಣದ ನೀರಲ್ಲಿ , ಮಧ್ಯರಾತ್ರೀಲಿ ಒಂದು ಅಂದಾಜಿನ ಮೇಲೆ ಇದೇ ರೋಡು ಅಂತ ಓಡಿಸ್ತಿರೋದಕ್ಕೆ ಶಭಾಷ್ ಅನ್ಬೇಕು. ಅಂತದ್ರಲ್ಲಿ ಹೊಂಡ, ಸ್ಪೀಡ್ ಬ್ರೇಕರನ್ನೆಲ್ಲಾ ತಪ್ಪಿಸು ಅನ್ನೋಕಾಗತ್ತಾ.. ಅದಲ್ಲದೇ ಮಲ್ಲೇಶ್ವರಂ ಮೇಲೆ ಹೋಗ್ಬೇಕಿತ್ತು, ಅಲ್ಲಿ ಹೋಗ್ಬೇಕಿತ್ತು, ಯಾವಾಗ ಕರ್ಕೊಂಡೋಗ್ತೀಯಪ್ಪಾ ಅನ್ನೋ ಜನಗಳು ಬೇರೆ..ಸಮಯಕ್ಕೆ ಸರಿಯಾಗಿ ಬೈದು ಕಂಡಕ್ಟರಪ್ಪ ಅವ್ರನ್ನೆಲ್ಲಾ ಸುಮ್ಮನಾಗಿಸಿದ ..ಅಂತೂ ನಾಲ್ಕೂವರೆಗೆ ಶಿವಮೊಗ್ಗಕ್ಕೆ ಬರ್ತಿದ್ದ ಬಸ್ಸು ಆರಕ್ಕೆ ಬಂದ. ಬೆಂಗಳೂರಲ್ಲಿ ಶುರುವಾದ ಮಳೆ ಶಿವಮೊಗ್ಗ ಇರ್ಲಿ, ಸಾಗರ ತಲುಪಿದ್ರೂ ಹೊಡಿತಾನೇ ಇತ್ತು..ಈಗ ತಾನೇ ಬಿದ್ದ ಮಳೆಯಿಂದ ಎಲ್ಲೆಡೆ ಚಿಗುರ್ತಿರೋ ಹಸಿರು ಹುಲ್ಲುಗಳು, ಮುತ್ತಂತೆ ಮಳೆಹನಿ ಹೊತ್ತ ಗಿಡಗಳು , ಬೆಳಬೆಳಗ್ಗೆ ಬರ್ತಿರೋ ನನಗೆಂದೇ ಕಾದಂತಿರೋ  ಮೇ ಫ್ಲವರ್ರು , ನಿನ್ನೆ ಎದ್ದು, ಸತ್ತ ಮಳೆ ಹುಳಕ್ಕೆ ಮುತ್ತಿರೋ ಇರುವೆಗಳು.. ವಾ..ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಅಂತಾರಲ್ಲ ಹಾಗೇ ಅನ್ನ ಕೊಡ್ತಿರೋ ಬೆಂದಕಾಳೂರಷ್ಟು ಸೌಕರ್ಯಗಳಿಲ್ಲರೂ ನಮ್ಮೂರು ನಮ್ಮೂರೇ ಅನಿಸಿತು. ಹಿಂದಿನ ರಾತ್ರಿ ಬಿದ್ದ ಭಾರೀ ಮಳೆಯ ಪ್ರಭಾವ ತುಂಬಿ ಹರೀತಿದ್ದ ಕೆಂಪು ಹೊಳೆಯಲ್ಲಿ, ನೀರು ತುಂಬಿದ್ದ ಗದ್ದೆಗಳಲ್ಲಿ ಕಾಣ್ತಾಯಿತ್ತು..ರಾತ್ರಿ ನಿದ್ರೆಗೆಟ್ಟ ಪರಿಣಾಮವೋ ಅಥವಾ ಮಳೆಯಿಂದ ರಸ್ತೆ ಮೋರಿಯಾಗಿ, ಬಸ್ಸೊಳಗೆ ನೀರು ನುಗ್ಗಿದ ಸುದ್ದಿ ಕೇಳಿದರೆ ಮನೆಯವರು ನಕ್ಕಾರೆಂಬ ಗುಮಾನಿಯಿಂದಲೋ ಹಾಗೆಯೇ ನಿದ್ದೆಗೆ ಜಾರಿದೆ :-) 
 
ಈ ಲೇಖನ "ಪಂಜು"ವಿನಲ್ಲಿ ಪ್ರಕಟವಾಗಿದೆ
http://www.panjumagazine.com/?p=2605

Monday, June 10, 2013

ಬೋಳು ಮರದ ಕೆಳಗೆ

ಮೊನ್ನೆ ಒಂದು ಮೆಸೇಜು.."ಹೂ ಈಸ್ ದಿಸ್".. ಹೆಸರಿರದ ಆ ನಂಬರಿನಿಂದ ಬಂದ ಮೊದಲ ಮೆಸೇಜು. ಅದೇ "ಹೂ ಈಸ್ ದಿಸ್ ಇಂದ ಪರಿಚಯವಾದ ನಿನ್ನ ನೆನಪನ್ನದು ಕೆಣಕಿದ್ದಂತೂ ನಿಜ ಗೆಳತಿ..ನೀನಿಲ್ಲದ ಬಾಳಿಂದು ಮಳೆಯಿಲ್ಲದೇ ಬರಗೆಟ್ಟ ನಾಡಂತೆ. ನೆಟ್ಟ ಸಸಿಗಳು ಕಣ್ಣೆದುರೇ ಒಣಗಿ ಸಾಯುತ್ತಿರೋ ಬಾಳೆಯ ತೋಟದಂತೆ. ನೀನಿತ್ತ ಪ್ರೀತಿಯ ಬಿಂದುಗಳಿಲ್ಲದೇ ಬಾಳಸಸಿಗಳು ಒಣಗುತ್ತಿವೆ ಗೆಳತಿ. ಮರೆಯಾದ ನಿನ್ನ ನೆನಪಲ್ಲೇ ಕೆಲವು ಸಾಲುಗಳು


ಮುಂಜಾನೆಯ ಮಂಜಿನಂತಾ
ಶೀತಲತೆ ನಿನ್ನ ಸ್ಪರ್ಶ
ಮಳೆಕಾಡ ಮುಂಗಾರಂತೆ
ಹನಿಬಿಡದ ನಿನ್ನ ಮಾತು
ನೀರವತೆಯ ರಾತ್ರಿಯನೇಕೆ ನುಂಗಿಹಾಕಿತು ?
ಹಗಲೆಂಬ ಹಾಳೆಯ ತುಂಬಾ ಮಸಿಯ ಚೆಲ್ಲಿತೊ

ನೋವುಗಳ ರಾತ್ರಿಯೆದುರು
ಬಾಹುಗಳ ಕೆಣಕೊ ನೆನಪು
ಬರಸೆಳೆಯೋ ಬೇಸರದೆದುರು
ಕಂಡಂತೆ ರಮಿಸೊ ಮುನಿಸು
ಓರೆ ನೋಟ, ಸಂಜ್ನೆಗಳಲ್ಲೂ ಮೌನ ಕಾಡಿತು.


ಹೇಳಲಾರದ ಮಾತು ಗೀತೆಯಾಯಿತು
ನಿನ್ನ, ಕೇಳಲಾಗದ ಮಾತು ಮೂಕವಾಯಿತು
ನೀನಿಲ್ಲದ ಬಾಳಿಂದು ಹೋಳಾಗಿ ಗೋಳಿಂದ
ಭಾವನೆಗಳ ಮರದೆಲೆಯುದುರಿ ಬೋಳಾಯಿತು.

ನಿನ್ನ ಬರವ ಬಾಳಿನಲ್ಲಿ
ಕಾದು ಕೂತ ಭೂಪ ನಾನು
ಹಗಲು ಇರುಳು ಕೆಲಸದಲ್ಲೂ
ಕನಸಿನಲ್ಲೂ ನೀನು ನಾನು
ಎಂಬ ಆಸೆ, ಭಾವಕ್ಕೆಲ್ಲಾ  ವಿಧಿಯು ಕಾಡಿತು
ಭಾರ್ಯೆಯಾಗೆ ಕಾದ ನಿನಗೆ ಸಾವು ನೀಡಿತು